ಬೆಂಗಳೂರು: ಆರ್.ಎಸ್.ಎಸ್ ಸೇರಿದಂತೆ ನಮ್ಮ ಎಲ್ಲ ಧಾರ್ಮಿಕ ಕೇಂದ್ರಗಳು, ಸಂಸ್ಕೃತಿಯ ಶ್ರದ್ಧಾ ಸ್ಥಳಗಳ ಕುರಿತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಪಾರ ಗೌರವ ಹೊಂದಿದ್ದರು ಎಂದು ಅಂಕಣಕಾರ, ಬರಹಗಾರ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಹೇಳಿದರು.
ಗುರುವಾರ ಥಿಂಕರ್ಸ್ ಫೋರಂ ಬಿ.ಎಂ.ಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 8 ನೇ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಾಜಪೇಯಿ ಅವರು ಸಂಘದ ಪ್ರಚಾರಕರಾಗಿ, ಜನಸಂಘದ ಉದಯವಾದ ದಿನದಿಂದ ಇಂದಿನ ಬಿಜೆಪಿ ಪ್ರವರ್ಧಮಾನಕ್ಕೆ ಬರುವವರೆಗೂ ರಾಷ್ಟ್ರ ಹಿತವನ್ನೇ ಉಸಿರಾಗಿಸಿಕೊಂಡು ಸಾಮಾನ್ಯ ಕಾರ್ಯಕರ್ತರಂತೆ ದುಡಿದರು. ಜನಸಂಘದ ಮೊದಲ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಕುತಂತ್ರದಿಂದ ಕಾಶ್ಮೀರದಲ್ಲಿ ಕೊಂದ ವಿಷಮ ಪರಿಸ್ಥಿತಿಯಲ್ಲಿ ಪಕ್ಷದ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸಿದರು. ನಮ್ಮ ಯೋಧರನ್ನು ಮತ್ತು ರಕ್ಷಣಾ ಪಡೆಗಳನ್ನು ಆಡಳಿತ ಪಕ್ಷದ ಮುಖಂಡರು ಹೀಯಾಳಿಸುತ್ತಿದ್ದ ರಾಜಕೀಯ ದುಸ್ಥಿತಿಯ ಕಾಲದಲ್ಲೂ, ಅತ್ಯಂತ ಚಿಕ್ಕ ಪಕ್ಷವನ್ನು ಪ್ರತಿನಿಧಿಸಿ ಲೋಕಸಭೆಯಲ್ಲಿ ರಾಷ್ಟ್ರದ ಪರ ಅಬ್ಬರಿಸುವ ಛಾತಿಯನ್ನು ತೋರಿದರು ಎಂದರು.
ನಮ್ಮ ಸನಾತನ ಧರ್ಮ, ರಾಷ್ಟ್ರ, ಸಂಸ್ಕೃತಿಯ ಬಗ್ಗೆ ಅಪಾರವಾದ ನಂಬಿಕೆಯನ್ನು ಅಟಲ್ ಜೀ ಹೊಂದಿದ್ದರು. ಆದರೆ ಅದರ ಜೊತೆ ಜೊತೆಗೆ ಒಟ್ಟಾರೆ ರಾಷ್ಟ್ರದ ಅಭಿವೃದ್ಧಿಗೆ ಸಹ ಮುನ್ನುಡಿಯನ್ನು ಬರೆದರು. ರಾಷ್ಟ್ರೀಯತೆಯ ಬೀಜವನ್ನು ಬಿತ್ತಿದರು. ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಕನಸು ಈಗ ಸಾಕಾರಗೊಳ್ಳುತ್ತಿದ್ದು, ಅದರ ತಳಪಾಯವನ್ನು ಗಟ್ಟಿಯಾಗಿ ಹಾಕಿದವರು ವಾಜಪೇಯಿ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅವರು ತೋರಿದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಹಿಂದೂಗಳ ಪರವಾಗಿ ಕಾಂಗ್ರೆಸ್, ಕಮ್ಯುನಿಸ್ಟರು ಕೇವಲ ಮೊಸಳೆ ಕಣ್ಣೀರನ್ನು ಸುರಿಸುತ್ತಾ ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದ ಸಮಯದಲ್ಲಿ ಸತ್ಯವನ್ನು ಧೈರ್ಯವಾಗಿ ತಮ್ಮದೇ ಆದ ಕಾವ್ಯಾತ್ಮದ ಶೈಲಿಯಲ್ಲಿ ಹೇಳುತ್ತಾ ದೇಶಾದ್ಯಂತ ಸಂಚರಿಸಿ ಕಾರ್ಯಕರ್ತರನ್ನು ಅಟಲರಾಗಿ ಸಂಘಟಿಸಿದರು. ಬೆರಳೆಣಿಯಷ್ಟು ಲೋಕಸಭಾ, ವಿಧಾನಸಭಾ ಸದಸ್ಯರನ್ನು ಹೊಂದಿದ್ದ ಪಕ್ಷವನ್ನು ರಾಷ್ಟ್ರದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿದರು. ಪಟ್ಟಭದ್ರ ಹಿತಾಸಕ್ತಿಗಳು ಸನಾತನ ಧರ್ಮಕ್ಕೆ ತಂದೊಡಿದ್ದ ಕತ್ತಲನ್ನು ತೊಡೆದು ಹಾಕಿದ ಶ್ರೇಯ ಅಟಲ್ ಜೀ ಅವರದ್ದು ಎಂದು ತರುಣ್ ವಿಜಯ್ ವ್ಯಾಖ್ಯಾನಿಸಿದರು.














