ಬೆಂಗಳೂರು: ಕೋಲಿ ಸಮಾಜ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಣಾಯಕ ಮತಗಳನ್ನು ಹೊಂದಿದ್ದರೂ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ, ಈ ಸಮಾಜದ ಮತ್ತು ಇತರ ಸಣ್ಣ ಸಣ್ಣ ಜಾತಿ ವರ್ಗಗಳ ಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ನೂತನವಾಗಿ ಆಯ್ಕೆಗೊಂಡಿರುವ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಹೇಳಿದರು.
ಗುರುವಾರ ವಿಧಾನಸಭೆಯಿಂದ ಪರಿಷತ್ ಸದಸ್ಯರ ಆಯ್ಕೆ ಸಂಬಂಧ ಚುನಾವಣೆ ನಡೆಯಿತು. ಅದೇ ದಿನ ತಡ ರಾತ್ರಿ ಅಧಿಕೃತವಾಗಿ 7 ಸದಸ್ಯರು ಆಯ್ಕೆಯಾಗಿರುವ ಘೋಷಣೆಯನ್ನು ಮಾಡಲಾಯಿತು. ಇವರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದಾಖಲೆಯ ಮೂರನೇ ಬಾರಿಗೆ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರ್ 30 ಶಾಸಕರ ಮತ ಪಡೆದು ಜಯದ ನಗೆ ಬೀರಿದ್ದು ವಿಶೇಷವಾಗಿತ್ತು. ಶುಕ್ರವಾರವಂತೂ ಶಾಸಕರ ಭವನಕ್ಕೆ ಹಿತೈಷಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಹಾರೈಸಿ ಹ್ಯಾಟ್ರಿಕ್ ಹೀರೋ ಆದ ಅವರಿಗೆ ಶುಭ ಕೋರಿದ್ದು, ಅವರ ಜನಪ್ರಿಯತೆಗೆ ಕೈಗನ್ನಡಿಯಾಗಿ ತೋರಿತು.
ಸಂಭ್ರಮಾಚರಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕರ್ನಾಟಕದಲ್ಲಿ ಈವರೆಗೂ ಯಾರು ಆಯ್ಕೆಯಾಗಿಲ್ಲ. ಈ ದಾಖಲೆ ಮಾಡಲು ಅನುವು ಮಾಡಿಕೊಟ್ಟ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಪಕ್ಷದ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು ಸಹ ಈ ಸಮಯದಲ್ಲಿ ನೆನೆಯಲು ಬಯಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹಾಗೂ ಎಲ್ಲಾ ಶಾಸಕರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ಪರಿಷತ್ ಸದಸ್ಯನಾಗಿ ಬಡವರ, ನಿರ್ಗತಿಕರ ಧ್ವನಿ ಆಗಲು ಅನುವು ಮಾಡಿಕೊಟ್ಟಿರುವುದು ಸಂತಸ ತಂದಿದೆ. ಇಲ್ಲಿ ನನ್ನ ಕೆಲಸ, ಸಂಘಟನೆ ಪಕ್ಷ ನಿಷ್ಠೆಯನ್ನು ಗುರುತಿಸಿ ಟಿಕೆಟ್ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿರುವುದು ಸಾಮಾನ್ಯ ಕಾರ್ಯಕರ್ತನಿಗೂ ಪ್ರೇರಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರನೇ ಬಾರಿ ಆಯ್ಕೆಯಾಗಿರುವುದು ದಾಖಲೆ:
ಮೊದಲೆರಡು ಬಾರಿ ಸಿಕ್ಕ ಅವಕಾಶ ಬಹಳಷ್ಟು ಕಡಿಮೆ ಅವಧಿಯದ್ದಾಗಿತ್ತು, ಒಟ್ಟಾರೆ ಸುಮಾರು ಎರಡೂ ವರ್ಷ ಅವಧಿಗೆ ಮಾತ್ರ ನನ್ನನ್ನು ಆಯ್ಕೆ ಮಾಡಲಾಗಿತ್ತು ಆದರೆ ಈ ಬಾರಿ ಸಂಪೂರ್ಣ 6 ವರ್ಷಗಳ ಅಧಿಕಾರಾವಧಿ ನೀಡಲಾಗಿದೆ. ಇದರೊಂದಿಗೆ ಈ ಬಾರಿ ಪಕ್ಷದ ವರಿಷ್ಠರು ಇನ್ನೂ ಹೆಚ್ಚು ಕೆಲಸದ ನಿರೀಕ್ಷೆಯನ್ನು ಸಹ ನನ್ನ ಮೇಲೆ ಇಟ್ಟಿದ್ದು ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೌನ್ಮುಖನಾಗುತ್ತೇನೆ. ಪಕ್ಷ ಮತ್ತು ಇಡೀ ಸಮಾಜಕ್ಕೆ ನ್ಯಾಯವನ್ನು ಒದಗಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಪ್ಪಣ್ಣಪ್ಪ ಕಮಕನೂರ್ ವಿಶ್ವಾಸ ವ್ಯಕ್ತಪಡಿಸಿದರು.














