ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಹಿತರಕ್ಷಣೆಗೆ ಸಂಘ ಬದ್ಧವಾಗಿದೆ ಎಂದು ಕ.ವಿ.ಪ್ರ.ನಿ ನೌಕರರ ಸಂಘದ ಅಧ್ಯಕ್ಷ ಕೆ. ಬಲರಾಂ ತಿಳಿಸಿದರು.
ಶನಿವಾರ ಆನಂದ್ ರಾವ್ ವೃತ್ತದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಕೇಂದ್ರ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾದ್ಯಮಗಳ ಜೊತೆ ಮಾತನಾಡಿದ ಕೆ. ಬಲರಾಂ, ಹಿಂದಿನ ವಜ್ರಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಆಶ್ವಾಸನೆಯಂತೆ 530 ಸ್ವೀಪರ್‌ಗಳನ್ನು ಖಾಯಂಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಬೋರ್ಡ್ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದ್ದು, ಇಂಧನ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಂಧನ ಇಲಾಖೆ ಕೇಳಿದ್ದ ಕೆಲ ಸ್ಪಷ್ಟೀಕರಣಗಳಿಗೆ ಉತ್ತರವನ್ನೂ ನೀಡಲಾಗಿದ್ದು, ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ಅಂತಿಮ ಅನುಮೋದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸ್ಥೆಯ ಮತ್ತು ನೌಕರರ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. 2027ರ ವೇತನ ಪರಿಷ್ಕರಣೆ ಹಾಗೂ ಹೊಸ ಪೇ-ಸ್ಕೇಲ್ ಜಾರಿ, ವಿವಿಧ ಹುದ್ದೆಗಳಿಗೆ ಮಂಜೂರಾತಿ ಮತ್ತು ಅಗತ್ಯ ಸಿಬ್ಬಂದಿಗಳ ನೇಮಕಾತಿ, ನೌಕರರಿಗೆ ಕ್ಯಾಶ್‌ಲೆಸ್ ಮೆಡಿಕಲ್ ಕಾರ್ಡ್ ಸೌಲಭ್ಯ ಹಾಗೂ ಕಾಲಕಾಲಕ್ಕೆ ಬಡ್ತಿ ಪ್ರಕ್ರಿಯೆಗಳ ಸರಳೀಕರಣಕ್ಕೆ ಸಂಘ ಬದ್ಧವಾಗಿದೆ ಎಂದರು.
ಅರ್ಹರಿರುವ ಪ್ರತಿಯೊಬ್ಬ ನೌಕರರಿಗೂ ಶೇ. 100 ರಷ್ಟು ಸೌಲಭ್ಯಗಳು ತಪ್ಪಿಸುವುದಕ್ಕೆ ಸಂಘ ಬದ್ಧವಾಗಿದೆ. ಸಂಸ್ಥೆಯ ಅಭಿವೃದ್ಧಿ ಹಾಗೂ ನೌಕರರ ಹಿತರಕ್ಷಣೆಗೆ ಸಂಘ ಒಗ್ಗಟ್ಟಿನಿಂದ ಶ್ರಮಿಸಲಿದೆ. ಸಾರ್ವಜನಿಕರಿಗೆ ಮತ್ತು ರೈತರಿಗೆ ನಿರಂತರ, ಅತ್ಯುತ್ತಮ ಸೇವೆ ನೀಡಲು ನೌಕರರ ಪಡೆ ಸದಾ ಸಿದ್ಧವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಶಿವರಾಂ ಸೇರಿದಂತೆ ಸಂಘದ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.














