ಜೀವನದ ಒತ್ತಡವನ್ನು ನಿವಾರಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ: ಡಾ. ಶಾಲಿನಿ ರಜನೀಶ್

WhatsApp
Telegram
Facebook
Twitter
LinkedIn

ಬೆಂಗಳೂರು: ಕೆಲಸದ ಒತ್ತಡ, ಕಚೇರಿ ಹಾಗೂ ಕೌಟುಂಬಿಕ ಜೀವನದ ಒತ್ತಡವನ್ನು ನಿವಾರಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.

ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸೋಮವಾರ ಗಾನಾಮೃತ ಮ್ಯೂಸಿಕ್ ತಂಡದ ವತಿಯಿಂದ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ನಾದ ನಮನ ವಿಶೇಷ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿರುವ ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಸಿಬ್ಬಂದಿಯಲ್ಲಿ ಸೃಜನಶೀಲತೆ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಆನಂದ್ ಮಾತನಾಡಿ, ದೈಹಿಕವಾಗಿ ನಮ್ಮೊಂದಿಗೆ ದೂರವಿದ್ದರೂ, ಗಾನ ಸರಸ್ವತಿ ಎಸ್. ಜಾನಕಿ ಅಮ್ಮನವರ ಕಂಠಸಿರಿ, ಸಂಗೀತ ಸಾಧನೆ  ಮುಂದಿನ ಹಲವು ತಲೆಮಾರುಗಳಿಗೂ ಉಳಿಯಲಿದೆ. ಅವರು ವಿವಿಧ ಭಾರತೀಯ ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದು, ಅವುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಕನ್ನಡ ಗೀತೆಗಳು ಸೇರಿವೆ ಎಂದರು.

ತಮ್ಮ ವಿಶಿಷ್ಟ ಕಂಠ, ಭಾವಪೂರ್ಣ ಗಾಯನ ಹಾಗೂ ಯಾವುದೇ ರೀತಿಯ ಹಾಡಿಗೂ ಜೀವ ತುಂಬುವ ಸಾಮರ್ಥ್ಯದ ಮೂಲಕ ಜಾನಕಿ ಅಮ್ಮನವರು ಭಾರತೀಯ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರ ಧ್ವನಿ ಕೇಳಿದಾಗ ಮನಸ್ಸಿನ ನೋವು, ಬೇಸರ ಹಾಗೂ ಒತ್ತಡಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂಗೀತ ಕ್ಷೇತ್ರದ ಸಾಧಕರಿಗೆ ಅವರ ಕೊಡುಗೆ ಅಮೂಲ್ಯ ನಿಧಿಯಂತಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನ ಗೌರವ ಕಾರ್ಯದರ್ಶಿ ನಾಗಭೂಷಣ್ ಮಾತನಾಡಿ, ಎಸ್. ಜಾನಕಿ ಅಮ್ಮನವರ ಸ್ಮರಣಾರ್ಥ ಸಚಿವಾಲಯ ಕ್ಲಬ್ ವತಿಯಿಂದ ಈ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಸುಮಧುರ ಗೀತೆಗಳನ್ನು ನೀಡುವ ಮೂಲಕ ಅವರು ಕನ್ನಡ ಸಂಗೀತ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಂಗೀತ ಸಾಧನೆಗೆ ಗೌರವ ಸಲ್ಲಿಸುವುದು ಸಚಿವಾಲಯದ ಹೆಮ್ಮೆಯ ಸಂಗತಿ ಎಂದರು.

ಸಚಿವಾಲಯ ಕ್ಲಬ್ ಹಿರಿಯ ಸದಸ್ಯರಿಗಾಗಿ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಹಿರಿಯ ಸದಸ್ಯರು ಸೇರಿದಂತೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಕಲಾವಿದರು ಹಾಡುವ ಮೂಲಕ ಅವರಿಗೆ ಸಂಗೀತ ನಮನ ಸಲ್ಲಿಸಿದರು. ಜಾನಕಿ ಅವರ ಗಾಯನದ ವಿವಿಧ ಆಯಾಮಗಳನ್ನು ಸ್ಮರಿಸಿದ ಕಲಾವಿದರು, ಅವರ ಅಮೋಘ ಕಂಠಸಿರಿ ಹಾಗೂ ಭಾವಪೂರ್ಣ ಗಾಯನವನ್ನು ಮೆಲುಕು ಹಾಕಿದರು. ಕಾರ್ಯಕ್ರಮವು ಸಂಗೀತಾಸಕ್ತರಿಗೆ ಜಾನಕಿ ಅವರ ಅಮರ ಗೀತೆಗಳ ನೆನಪುಗಳನ್ನು ಮತ್ತೊಮ್ಮೆ ತಂದುಕೊಟ್ಟಿತು.

ಈ ವೇಳೆ ಕೆಜಿಐಡಿ ಉಪ ನಿರ್ದೇಶಕ ಹೆಚ್. ವಿ. ಶ್ರೀಧರ್, ಕಾರ್ಡ್ಸ್ ಕಾರ್ಯದರ್ಶಿ ಹಾಗೂ ಅಂತರಿಕ ಲೆಕ್ಕಪರಿಶೋಧಕ ಗುರುಸ್ವಾಮಿ.ಪಿ, ಸಾಂಸ್ಕೃತಿಕ ಹಾಗೂ ಹೊರಾಂಗಣ ಕ್ರೀಡಾ ಕಾರ್ಯದರ್ಶಿ ಮಹೇಂದ್ರ ಎಂ.ವಿ, ಖಜಾಂಚಿ ಹಾಗೂ ಒಳಾಂಗಣ ಕ್ರೀಡಾ ಕಾರ್ಯದರ್ಶಿ ಕಾಂತರಾಜು. ಬಿ.ಎಲ್ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon