ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರ: ವಿನಿಷಾ ನೀರೋ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ನಿಗಮವು ಸರ್ಕಾರದ ನಿಯಮಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವು ವ್ಯಕ್ತಿಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕಿ ಹಾಗೂ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿನಿಷಾ ನೀರೋ ಸ್ಪಷ್ಟಪಡಿಸಿದರು.

ಬುಧವಾರ ಅಭಿವೃದ್ಧಿ ನಿಗಮದ ವಿರುದ್ಧ ಕೆಲ ಕ್ರಿಶ್ಚಿಯನ್ ಸಂಘಟನೆಗಳು ಮಾಡುತ್ತಿರುವ ಆರೋಪದ ಕುರಿತು ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರ ಮಂಡಳಿ ಕ್ರಿಶ್ಚಿಯನ್ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ. ನಿಗಮವು ಕೇವಲ ಚರ್ಚ್ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಸೀಮಿತವಾಗದೆ, ಶಿಕ್ಷಣ, ಉದ್ಯೋಗ, ಸ್ಕಿಲ್ ಡೆವಲಪ್ಮೆಂಟ್ ಗೆ ಆದ್ಯತೆ ನೀಡುತ್ತಿದೆ ಎಂದರು.

ಅರ್ಜಿಗಳ ವಿಲೇವಾರಿ, ಅನುದಾನ ಬಿಡುಗಡೆಗೆ ಎಲ್ಲವೂ ಸುಲಲಿತವಾಗಿ ನಡೆಯುತ್ತಿದೆ. ಸಲ್ಲಿಸಲಾದ ಕೆಲವು ಅರ್ಜಿಗಳಲ್ಲಿ ನಕಲಿ ದಾಖಲೆಗಳು ಮತ್ತು ತಪ್ಪು ಆಡಿಟ್ ವರದಿಗಳು ಕಂಡುಬಂದಿವೆ. ಸರಿಯಾದ ದಾಖಲೆಗಳಿಲ್ಲದೆ ಸರ್ಕಾರದ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಲೋಪದೋಷಗಳಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನಿಗಮದ ಎಲ್ಲಾ ಯೋಜನೆಗಳು, ಬಿಡುಗಡೆಯಾದ ಅನುದಾನ ಮತ್ತು ಫಲಾನುಭವಿಗಳ ವಿವರಗಳು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಮತ್ತು ಮಾಧ್ಯಮಗಳು ಪರಿಶೀಲಿಸಬಹುದಾಗಿದೆ. 2025ರ ಅಂತ್ಯದ ವೇಳೆಗೆ ಬಿಡುಗಡೆಯಾದ 85 ಕೋಟಿ ರೂ. ಪೈಕಿ 74 ಕೋಟಿ ರೂ. ಕೇವಲ ಎರಡೂವರೆ ತಿಂಗಳಲ್ಲಿ ನಿಗಮವು ಪರಿಣಾಮಕಾರಿಯಾಗಿ ಬಳಸಿದೆ. ಸಮುದಾಯದ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬುದೇ ನಿಗಮದ ಮುಖ್ಯ ಉದ್ದೇಶವಾಗಿದೆ ಎಂದರು.

ಶಾಸಕಿಯಾಗಿ ಸಾಕಷ್ಟು ಶ್ರಮಿಸಿದ್ದೇನೆ:

ಕಾಂಗ್ರೆಸ್ ಸರ್ಕಾರವು ತಮ್ಮನ್ನು ಎರಡು ಬಾರಿ ಆಂಗ್ಲೋ-ಇಂಡಿಯನ್ ಸಮುದಾಯದ ಪ್ರತಿನಿಧಿಯಾಗಿ ಗುರುತಿಸಿ ಶಾಸಕಿಯಾಗಿ ನಾಮನಿರ್ದೇಶನ ಮಾಡಿತ್ತು. ಆದರೆ ಕೇಂದ್ರದ ಮೋದಿ ಸರ್ಕಾರ ಆಂಗ್ಲೋ-ಇಂಡಿಯನ್ ನಾಮನಿರ್ದೇಶನ ವ್ಯವಸ್ಥೆಯನ್ನೇ ರದ್ದುಗೊಳಿಸಿತು. ಇದರಿಂದ ನಮ್ಮ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದ್ದು, ಪ್ರಸ್ತುತ ಇದರ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಶಾಸಕಿಯಾಗಿದ್ದ ಅವಧಿಯಲ್ಲಿ ಕೇವಲ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಸೀಮಿತವಾಗದೆ ರಾಜ್ಯದ 26ಕ್ಕೂ ಹೆಚ್ಚು ಜಿಲ್ಲೆಗಳಿಗೆ ಪ್ರವಾಸ ಮಾಡಿ, ಇಡೀ ಕರ್ನಾಟಕದ ಜನರ ಏಳಿಗೆಗಾಗಿ ನಾನು ಶ್ರಮಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಸರ್ಕಾರ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಸ್ಥಾನ ನೀಡಿದೆ ಎಂದು ವಿವರಿಸಿದರು.

ಸುಳ್ಳು ಮಾಹಿತಿಗಳನ್ನು ಹರಡಬಾರದು:

ಆಂಗ್ಲೋ-ಇಂಡಿಯನ್ ಸಮುದಾಯವು ದಶಕಗಳಿಂದಲೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ರೈಲ್ವೆ, ಅಂಚೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮುದಾಯದ ಕೊಡುಗೆ ಅಪಾರವಾಗಿದೆ. 1940-50ರ ದಶಕದಿಂದಲೇ ಸಮುದಾಯವು ದೇಶ ಕಟ್ಟುವ ಕೆಲಸದಲ್ಲಿದೆ. ಆದ್ದರಿಂದ ತಾರತಮ್ಯ ನಡೆಯುತ್ತಿದೆ ಎನ್ನುವ ಸುಳ್ಳು ಮಾಹಿತಿಗಳನ್ನು ಹರಡುವುದನ್ನು ಬಿಟ್ಟು, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಮತ್ತೋರ್ವ ಉಪಾಧ್ಯಕ್ಷರಾದ ಸಂಜಯ್ ಜಾಗೀರ್ದಾರ್ ಉಪಸ್ಥಿತರಿದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon