ಬೆಂಗಳೂರು: ಭಾರತದ ಬಲ ಅದರ ಸಂಸ್ಕೃತಿಯಲ್ಲಿ ಅಡಗಿದೆ. ಇದರ ಆಧಾರದ ವೃತ್ತಿಪರತೆಯಿಂದ ಇಂದು 4 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಬಂದು ನಾವು ನಿಂತಿದ್ದೇವೆ. ಇದನ್ನು ಇನ್ನಷ್ಟು ಬೆಳೆಸುವಂತೆ ಮಾಡಲು ಆರೋಗ್ಯ ಕ್ಷೇತ್ರದ ಬೆಳವಣಿಗೆ ಅತಿ ಮುಖ್ಯ. ರೋಗಿಗಳು ಅದಷ್ಟು ಬೇಗ ರೋಗದಿಂದ ಗುಣಮುಖರಾಗಿ ಹೊರಬಂದು ತಮ್ಮ ಕೆಲಸ ಕಾರ್ಯದಲ್ಲಿ ತೊಡಗುವುದು ಸಹ ಆರ್ಥಿಕತೆಗೆ ಮತ್ತಷ್ಟು ಇಂಬು ನೀಡಲಿದೆ ಎಂದು ಸಿಮನ್ಸ್ ಹೇಲ್ತಿನೀರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಚೇತನ್ ಹೆಚ್.ಡಿ ಹೇಳಿದರು.
ಶುಕ್ರವಾರ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನಜ್ಮೆಂಟ್ ಅಂಡ್ ರಿಸರ್ಚ್ ಸಂಸ್ಥೆಯಲ್ಲಿ ನಡೆದ 2026 ವರ್ಷದ ಹೊಸ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಕಷ್ಟು ಹೊರ ದೇಶಗಳಿಂದ ರೋಗಿಗಳು ನಮ್ಮ ದೇಶಕ್ಕೆ ಬರುತ್ತಿದ್ದಾರೆ. ಬಹುತೇಕ ರಾಷ್ಟ್ರಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹಿಂದಿವೆ. ದಾದಿಯರ ಹಾಗು ವೈದ್ಯರ ಕೊರತೆ ಅಲ್ಲಿದ್ದು, ವೈದ್ಯಕೀಯ ಸಾಧನಗಳು ಸರಿಯಾಗಿ ಇರದಿರುವುದು ಸಹ ರುಜುವಾತಾಗಿದೆ. ಆದ್ದರಿಂದ ನಮ್ಮ ದೇಶದ ಆರ್ಥಿಕತೆಗೆ ಮೆಡಿಕಲ್ ಟೂರಿಸಂ ಕೂಡ ದೊಡ್ಡ ಕೊಡುಗೆ ನೀಡಿದೆ ಎಂದರು.
ಎಸ್.ವಿ.ಎಂ ಆಸ್ಪತ್ರೆಯ ಸಹ ಸಂಸ್ಥಾಪಕರಾದ ಡಾ ಚಂದಿಲ್ ಕುಮಾರ್ ಮಾತನಾಡಿ, ಅಸ್ಪತ್ರೆ ನಿರ್ವಹಣೆ ಕ್ಷೇತ್ರ ಹೊಸ ತಂತ್ರಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಳವಡಿಸಿಕೊಳ್ಳುತ್ತಿದ್ದು, ಇದರ ಹೊರತಾಗಿ ಈ ಕ್ಷೇತ್ರದಲ್ಲಿ ಕೆಲಸಗಳು ಕಡಿಮೆಯಾಗುವುದರ ಬದಲಾಗಿ ಹೆಚ್ಚಾಗುತ್ತಿವೆ. ಇಲ್ಲಿನ ವೃತ್ತಿಪರತೆಯನ್ನು ಟೆಕ್ನಾಲಜಿ ಹಿಂದಿಕ್ಕುವುದು ಬಹುತೇಕ ಅಸಾಧ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ವೃತ್ತಿಪರತೆಯನ್ನು ಬೆಳೆಸಿಕೊಂಡರೆ ಬಹಳ ಸುಲಭವಾಗಿ ಉನ್ನತ ಹುದ್ದೆಗಳಿಗೆ ಏರಬಹುದು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಹ್ಯಾಪಿಎಸ್ಟ್ ಮೈಂಡ್ಸ್ ಟೆಕ್ನಾಲಜಿಯ ಹಿರಿಯ ಪ್ರಾಡಕ್ಟ್ ಮ್ಯಾನೇಜರ್ ಸಂದೀಪನ್ ದೇ ಮಾತನಾಡಿ, ನಾನು ಐ.ಐ.ಹೆಚ್.ಎಂ.ಆರ್ ಶಿಕ್ಷಣ ಸಂಸ್ಥೆಯ ಮೊದಲ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದೇನೆ. ಇಲ್ಲಿನ ವಿದ್ಯಾರ್ಥಿ ದಿನಗಳ ನೆನಪುಗಳು ಇನ್ನೂ ಹೆಚ್ಚ ಹಸಿರಾಗಿ ನನ್ನ ಮನಸ್ಸಿನಾಳದಲ್ಲಿ ಉಳಿದಿವೆ. ಇಂದು ಈ ಸಂಸ್ಥೆ ಅತಿ ಎತ್ತರಕ್ಕೆ ಬೆಳದಿದ್ದು, ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದೆ ಎಂದರು.
ಕಾರ್ಮಿಕ ವಿಮಾ ನಿಗಮದ ನಿವೃತ್ತ ಡೈರೆಕ್ಟರ್ ಜನರಲ್, ಐ.ಐ.ಹೆಚ್.ಎಂ.ಆರ್ ಹಿರಿಯ ಸಲಹೆಗಾರರಾದ ಡಾ. ಸಿ. ಎಸ್. ಕೇದಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಬಹುಮುಖ್ಯವಾಗಿದೆ ಆದ್ದರಿಂದ ಉತ್ಸಾಹವನ್ನು ಎಂದೂ ಕಳೆದುಕೊಳ್ಳದೆ ಮುಂದಿನ ವೃತ್ತಿನಿರತ ತರಬೇತಿಗೆ ಸಜ್ಜುಗೊಂಡರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವೆಲ್ಲರೂ ಡಿಜಿಟಲ್ ಬೆಳವಣಿಗೆಗೆ ಸಾಕಷ್ಟು ಒತ್ತು ನೀಡುತ್ತಿದ್ದೇವೆ ಆದರೆ ಇದರೊಂದಿಗೆ ಸಂಬಂಧಗಳ ಬೆಳವಣಿಗೆಯ ಜೊತೆಗೆ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ ಎಸ್ ಸದಗೋಪನ್ ಕಿವಿಮಾತು ಹೇಳಿದರು.
40 ವರ್ಷದ ನನ್ನ ಅನುಭವದಲ್ಲಿ ಹೇಳುವುದಾದರೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಆರೋಗ್ಯ ಕ್ಷೇತ್ರದ ಹೊಸ ತಂತ್ರಜ್ಞಾನಗಳಿಗೆ ಸಿಗುತ್ತಿರುವ ಉತ್ತೇಜನ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ದೊಡ್ಡ ಬಂಡವಾಳ ಹೂಡಿಕೆ ಹಲವು ಬಹುರಾಷ್ಟ್ರೀಯ ಕಂಪನಿಗಳಿಂದ ಕೂಡ ಈ ವಲಯಕ್ಕೆ ಕಳೆದ 5 ವರ್ಷಗಳಲ್ಲಿ ಭಾರತಕ್ಕೆ ಬಹು ಕೋಟಿಗಳಲ್ಲಿ ಹರಿದು ಬಂದಿದೆ ಎಂದು ಗ್ರೂಪ್ ಫಾರ್ಮಸಿಟಿಕಲ್ ಕಂಪನಿಯ ಸಿ.ಇ.ಒ ಸುನಿಲ್ ಅತ್ತಾವರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಸುನಿಲ್ ಕುಮಾರ್ ಸಿ.ಎನ್, ಐ.ಐ.ಹೆಚ್.ಎಂ.ಆರ್ ಮ್ಯಾನೇಜ್ಮೆಂಟ್ ಬೋರ್ಡ್ ಅಧ್ಯಕ್ಷ ಎಸ್.ಡಿ ಗುಪ್ತ, ಸಂಸ್ಥೆಯ ಡೈರೆಕ್ಟರ್ ಡಾ ಉಷಾ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.














