ಬೆಂಗಳೂರು: ಕ್ರೈಸ್ತ ಅಭಿವೃದ್ಧಿ ನಿಗಮದ ಹಣಕಾಸು ಮತ್ತು ಕಾರ್ಯವೈಖರಿ ಕುರಿತು ರಾಜ್ಯ ಸರ್ಕಾರ ಪಾರದರ್ಶಕವಾದ ತನಿಖೆ ನಡೆಸಬೇಕು ಎಂದು ರೆಡ್ ಆರ್ಮಿಯ ಮುಖ್ಯಸ್ಥ ಇಸಾಕ್ ಕೆಂಪನವರ ಒತ್ತಾಯಿಸಿದರು.
ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ 2ನೇ ಕಂತಿನ ಅನುದಾನ ಸೇರಿದಂತೆ ಸರ್ಕಾರದಿಂದ ಮಂಜೂರಾದ ಹಣದ ಬಿಡುಗಡೆ ಮತ್ತು ಬಳಕೆಯ ಸಂಪೂರ್ಣ ಲೆಕ್ಕವನ್ನು ಸಾರ್ವಜನಿಕಗೊಳಿಸಬೇಕು. ನಿಗಮದ ಅಧ್ಯಕ್ಷರು ಉಪಾಧಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಕಾರ್ಯವೈಖರಿಯನ್ನು ಪರಿಶೀಲಿಸಿ, ಕರ್ತವ್ಯ ಲೋಪ ಕಂಡುಬಂದರೆ ಕಾನೂನುಬದ್ದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆಕ್ಷನ್ ಪ್ಲಾನ್ ಅಡಿಯಲ್ಲಿ ಘೋಷಿಸಿದ ಯೋಜನೆಗಳ ಅನುಷ್ಠಾನ, ಹಣದ ಬಳೆ ಹಾಗೂ ಫಲಾನುಭವಿಗಳ ವಿವರಗಳನ್ನು ಪ್ರಕಟಿಸಬೇಕು. ಶಿಕ್ಷಣ ಸಾಲದಲ್ಲಿ 142 ಅರ್ಜಿಗಳಲ್ಲಿ 25, ವಿದೇಶಿ ಶಿಕ್ಷಣ ಸಾಲದಲ್ಲಿ 70 ಅರ್ಜಿಗಳಲ್ಲಿ 4, ಸ್ವಯಂ ಉದ್ಯೋಗ ಸಣ್ಣ ಉದ್ಯಮ ಯೋಜನೆಯಲ್ಲಿ 1,344 ಅರ್ಜಿಗಳಲ್ಲಿ ಸುಮಾರು 200 ಅರ್ಜಿಗಳಿಗೆ ಮಾತ್ರ ಸೌಲಭ್ಯ ದೊರೆಯುವುದಾಗಿ ತಿಳಿದುಬಂದಿದ್ದು ಉಳಿದ ಅರ್ಜಿಗಳ ಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎಂದರು.
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಟ್ರೈನಿಂಗ್ ಯೋಜನೆಯಡಿಯಲ್ಲಿ ಅರ್ಜಿಗಳು ಬಂದಿದ್ದರೂ ಸೌಲಭ್ಯ ಪಡೆದವರ ಸಂಖ್ಯೆ ಶೂನ್ಯ ಎನ್ನಲಾಗುತ್ತಿದೆ. ಗಂಗಾಕಲ್ಯಾಣ ಯೋಜನೆಯ 517 ಅರ್ಜಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಿ ಅರ್ಹರಿಗೆ ಸೌಲಭ್ಯ ಏಕೆ ದೊರೆತಿಲ್ಲ ಎನ್ನುವುದನ್ನು ತಿಳಿಸಬೇಕು, ಸಮುದಾಯದ ಮುಂದೆ ಹೇಳಲಾದ ರೂ.250 ಕೋಟಿ ಅಭಿವೃದ್ಧಿ ಯೋಜನೆ/ಭರವಸೆಯ ಹಣಕಾಸು ವಿವರಗಳನ್ನು ಶ್ವೇತ ಪತ್ರದ ಮೂಲಕ ಬಹಿರಂಗಪಡಿಸಬೇಕು ಎಂದರು.
ಇತ್ತೀಚೆಗೆ ನಡೆದ ಸಭೆಯ ಆಹ್ವಾನ ಪತ್ರಿಕೆಯಲ್ಲಿ ಕರ್ನಾಟಕ ಸರ್ಕಾರದ ಉಲ್ಲೇಖವನ್ನು ಬಳಸಿರುವುದು ಆಕ್ಷೇಪರ್ಹವಾಗಿದೆ. ಸರ್ಕಾರದ ಹೆಸರನ್ನು ಹಾಗೂ ಉಲ್ಲೇಖವನ್ನು ಬಳಸಿಕೊಂಡು ಸಭೆ ನಡೆಸಲಾಗುತ್ತಿದೆ, ಇದಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಅಥವಾ ಅನುಮತಿ ನೀಡಲಾಗಿದೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಸಾರ್ವಜನಿಕ ಸಂಸ್ಥೆಯ ರೀತಿಯಲ್ಲಿ ಸಭೆ ನಡೆಸುತ್ತಿದ್ದರೆ ಸಾರ್ವಜನಿಕರಿಗೆ ಸಂಪೂರ್ಣ ಲೆಕ್ಕ ನೀಡಬೇಕು ಹಾಗೂ ಸಭೆಯ ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ಹೋರಾಟವಲ್ಲ. ಕ್ರೈಸ್ತ ಸಮುದಾಯದ ನ್ಯಾಯ, ಹಕ್ಕು, ಗೌರವ ಮತ್ತು ಅಭಿವೃದ್ಧಿಗಾಗಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಹೋರಾಟವಾಗಿದೆ ಎಂದು ಐಸಾಕ್ ಕೆಂಪನವರ ತಿಳಿಸಿದರು.














