ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು: ಜಿಲ್ಲಾಧಿಕಾರಿ ಕಾಂತರಾಜು.ಪಿ.ಎಸ್

WhatsApp
Telegram
Facebook
Twitter
LinkedIn

ಬೆಂಗಳೂರು: ಜಿಲ್ಲೆಯಾದ್ಯಂತ ಜೂನ್ 28 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಐದು ವರ್ಷದೊಳಗಿನ ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗದಂತೆ ನಿಗಾವಹಿಸಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರವು ಹೆಚ್ಚಿನ ಉತ್ತೇಜನ ನೀಡಿದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ರಾಷ್ಟ್ರೀಯ ಪಲ್ಸ್ ಫೋಲಿಯೋ ಕಾರ್ಯಕ್ರಮದ ಬಗ್ಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಲಸಿಕೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ಆರೋಗ್ಯ ಇಲಾಖೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವೀಂದ್ರನಾಥ್ ಮೇಟಿ ಮಾತನಾಡಿ, ಜಿಲ್ಲೆಯಲ್ಲಿ  ಐದು ವರ್ಷದೊಳಗಿರುವ ಸುಮಾರು 2,09,903 ಮಕ್ಕಳು ಇದ್ದು, ಒಟ್ಟು 728 ಲಸಿಕಾ ಬೂತ್ ಗಳು, 49 ಟ್ರಾನ್ಸಿಟ್ ಟೀಂಗಳು ಮತ್ತು 46 ಮೊಬೈಲ್ ಟೀಂಗಳಿಂದ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗುವುದು. ಈ ಕಾರ್ಯಕ್ಕೆ ಒಟ್ಟು 3,102 ಲಸಿಕಾ ಕಾರ್ಯಕರ್ತರು, 146 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜೂನ್ 28 ರಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ, ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುವುದು. ಜೂನ್ 29 ಹಾಗೂ 30 ರಂದು ಗ್ರಾಮಾಂತರ ಪ್ರದೇಶ ಹಾಗೂ ಜೂನ್ 29 ರಿಂದ ಜುಲೈ 1 ರವರೆಗೆ ನಗರ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ 2007 ರಲ್ಲಿ ಕೊನೆಯದಾಗಿ ಒಂದು ಪೋಲಿಯೋ ಪ್ರಕರಣ ಕಂಡುಬಂದಿತ್ತು. ನಂತರ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಪೋಲಿಯೋ ಲಸಿಕೆ ಹಾಕಿಸಿದ ಮಗುವಿನ ಕಿರು ಬೆರಳಿಗೆ ಅಳಿಸಲಾಗದ ಇಂಕ್ ಹಾಕಲಾಗುವುದು. ಇದರಿಂದ ಯಾರಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ತಿಳಿಯುವುದರೊಂದಿಗೆ, ಎರಡೆರಡು ಬಾರಿ ಲಸಿಕೆ ಹಾಕಿಸುವುದನ್ನು ತಪ್ಪಿಸಬಹುದಾಗಿದೆ. ವಲಸೆ ಹೋಗಿರುವ ಹಾಗೂ ವಲಸೆ ಬಂದಿರುವ ಕುಟುಂಬದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಆರ್.ಸಿ.ಹೆಚ್  ಅಧಿಕಾರಿ ಡಾ. ನದೀಮ್ ಅಹಮದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಶರತ್, ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon