ಬೆಂಗಳೂರು: ಮೊನ್ನೆ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದರು ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಮೈಲಿಗೆ ಎಂದು ಪರಿಗಣಿಸಿ ಹೋಮ, ಹವನ ಮಾಡಿ ಶುದ್ಧೀಕರಣ ನಡೆಸಿದ ಘಟನೆಯನ್ನು ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ ಮತ್ತು ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಗಾಂಧಿನಗರದ ಕನಿಷ್ಕಾ ಹೋಟೆಲ್ ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಬಿ. ಗೋಪಾಲ್, ಈ ಶುದ್ಧೀಕರಣ ಕ್ರಿಯೆ ಕೇವಲ ಒಬ್ಬ ಸಾಂವಿಧಾನಿಕ ಸ್ಥಾನದಲ್ಲಿರುವ ಖರ್ಗೆಯವರಿಗಷ್ಟೇ ಅಲ್ಲದೆ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಶುದ್ಧೀಕರಣ ಕ್ರಿಯೆ ಕೇವಲ ಒಬ್ಬ ಸಾಂವಿಧಾನಿಕ ಸ್ಥಾನದಲ್ಲಿರುವ ಖರ್ಗೆಯವರಿಗಷ್ಟೇ ಅಲ್ಲದೆ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ. ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಜನ, ಇನ್ನು ಮುಂದೆ ಭಾರತದ ದಲಿತರು ನಡೆದಾಡಿದ ರಸ್ತೆ, ಬಳಸುವ ಸಾರ್ವಜನಿಕ ಸ್ಥಳ ಎಲ್ಲವೂ ಮಲಿನವಾಗಿದೆ ಎಂದು ಭಾವಿಸುವುದಾದರೆ, ಅದನ್ನೂ ಶುದ್ಧೀಕರಣ ಮಾಡುವ ಕೆಲಸ ಮಾಡಲಿ ಎಂದು ಕಿಡಿಕಾರಿದರು.
ಇದೇ ವೇಳೆಯಲ್ಲಿ ವಂದೇ ಮಾತರಂ ಗೀತೆಗೆ ಅವಮಾನವಾಗಿದೆ ಎಂದು ತತಕ್ಷಣವೇ ಹೌಹಾರಿದ ಕೇಂದ್ರ ಗೃಹ ಮಂತ್ರಿ, ಸಂವಿಧಾನ ವಿರೋಧಿಯಾದ ಈ ಶುದ್ಧೀಕರಣ ಕ್ರಮದ ವಿರುದ್ಧ ಚಕಾರವೆತ್ತದಿರುವುದು, ದಲಿತರ ಬಗ್ಗೆ ಅವರಿಗಿರುವ ತಾತ್ಸಾರ ಮತ್ತು ಅಸಹ್ಯ ಭಾವನೆಯನ್ನೇ ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.
1927ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಚೌಡರ್ ಕೆರೆ ಸತ್ಯಾಗ್ರಹದ ಸಂದರ್ಭದಲ್ಲಿ ಜಗಜೀವನ್ ರಾಂ ಅವರು ಉಪಪ್ರಧಾನಿಯಾಗಿದ್ದಾಗ ಮಧುರಾ ದೇವಸ್ಥಾನದಲ್ಲಿ ಮತ್ತು ಹಿಂದಿನ ಕೇರಳ, ಮದ್ರಾಸ್ ಪ್ರಾಂತ್ಯದಲ್ಲಿ ದಲಿತರ ವಿರುದ್ಧ ನಡೆದ ಇಂತಹುದೇ ಶುದ್ಧೀಕರಣ ಪ್ರಕರಣಗಳನ್ನು ಇತಿಹಾಸದಲ್ಲಿ ದಾಖಲಾಗಿದೆ. ಈಗ ಖರ್ಗೆಯವರ ಸಂದರ್ಭದಲ್ಲಿ ನಡೆದ ಘಟನೆ, ಮನುವಾದಿ ಮನಸ್ಥಿತಿ ಇಂದಿಗೂ ಜೀವಂತವಾಗಿರುವುದನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆಯ ಬಗ್ಗೆ ಪ್ರಧಾನ ಮಂತ್ರಿಗಳಾಗಲಿ, ಗೃಹ ಮಂತ್ರಿಗಳಾಗಲಿ ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರಾಗಲಿ ಈವರೆಗೆ ಖಂಡಿಸಿಲ್ಲ ಎಂಬುದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಶುದ್ಧೀಕರಣ ನಡೆಸಿದ ಜಾತಿವಾದಿಗಳ ವಿರುದ್ಧ ಇದುವರೆಗೆ ಯಾವುದೇ ಕಾನೂನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಗಳು ಮರುಕಳಿಸಬಾರದು ಕೇಂದ್ರ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಮಯದಲ್ಲಿ ರಾಜ್ಯದ ಎಲ್ಲಾ ದಲಿತ ಸಂಘಟನೆಗಳ ರಾಜ್ಯಾಧ್ಯಕ್ಷರು, ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ಪ್ರಗತಿಪರರು, ಯುವಜನತೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














