ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ನಾಶಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರ ಸಣ್ಣ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ ಎಂದು ಜೆಡಿಎಸ್ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ ವಾಗ್ದಾಳಿ ನಡೆಸಿದರು.
ಶುಕ್ರವಾರ ರಾಜ್ಯ ಜೆಡಿಎಸ್ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರವು ಹೊರಡಿಸಿರುವ ಅಂತಿಮ ಗೆಜೆಟ್ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯಾಗಿದೆ. ಜಾರಿಗೆ ತರಲಾಗುತ್ತಿರುವ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ದಂಧೆ ಅಡಗಿದೆ. ಸ್ಥಳೀಯ ಮಣ್ಣಿನ ಮಕ್ಕಳ ಹಾಗೂ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಬಿಡದಿ ಟೌನ್ಶಿಪ್ ಯೋಜನೆಯನ್ನು ಶೀಘ್ರವೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಯೋಜನೆಯಡಿ ಬರುವ 614 ರೈತರ ಕುಟುಂಬಗಳು (ಶೇ.81ಕ್ಕೂ ಹೆಚ್ಚು)1 ಎಕರೆಗಿಂತ ಕಡಿಮೆ ಜಮೀನು ಹೊಂದಿವೆ. ತಮ್ಮ ಒಪ್ಪತ್ತಿನ ಗಂಜಿಗಾಗಿ ಕೇವಲ ಈ ಅರ್ಧ ಅಥವಾ ಕಾಲು ಎಕರೆ ಜಮೀನನ್ನೇ ನಂಬಿ ಬದುಕುತ್ತಿರುವ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡ ಕುಟುಂಬಗಳನ್ನು ಈ ಸರ್ಕಾರ ಸಂಪೂರ್ಣವಾಗಿ ನಾಶಮಾಡಲು ಹೊರಟಿದೆ. ಈ ಯೋಜನೆಗೆ ಕಳೆದ ಬಜೆಟ್ನಲ್ಲಿ ನಿರ್ಧಿಷ್ಟ ಹಣ ಇಟ್ಟಿಲ್ಲ. ಯೋಜನೆಯನ್ನು ಖಾಸಗಿಯವರಿಗೆ ನೀಡಿ ರಾಜ್ಯ ಸರ್ಕಾರವು 15ರಿಂದ 16 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ, ಯಾವು ಕೂಡ ಯಶಸ್ವಿಯಾಗಿಲ್ಲ, ಈ ಸಂಬಂಧ ರೈತರು ಸೇರಿದಂತೆ ನಿವೇಶನಗಳನ್ನು ಪಡೆದಿರುವವರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿಡದಿ ಟೌನ್ಶಿಪ್ ಯೋಜನೆಯನ್ನು ರದ್ದುಗೊಳಿಸುವ ಕುರಿತಾದ ಮನವಿ ಪತ್ರವನ್ನು ರಾಜ್ಯಪಾಲರು ಸೇರಿ ಮುಖ್ಯಕಾರ್ಯದರ್ಶಿ ಅವರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ ಮುಂದಿನ ತಿಂಗಳು ಸುಮಾರು 7481ರಿಂದ 9,600 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸಂಚು ರೂಪಿಸಿದೆ. ರೈತರು ಭೂಮಿ ಕೊಡಲು ಇಷ್ಟಪಡುತ್ತಿಲ್ಲ. ಹೀಗಾಗಿ ಸರ್ಕಾರವೇ ಕೋರ್ಟ್ ನಲ್ಲಿ ಪರಿಹಾರ ಹಣವನ್ನು ಜಮೆ ಮಾಡಿ ಭೂಮಿಯನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ರೈತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಭೂಮಿಯನ್ನು ಕಸಿದುಕೊಳ್ಳುತ್ತಿರುವ ಭಾಗವು ಹೈನುಗಾರಿಕೆಯ ಸಮೃದ್ಧ ಜಾಗವಾಗಿದ್ದು, ಮಾಸಿಕ ಸುಮಾರು 6 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಬೆಂಗಳೂರು ಡೇರಿಗೆ ಪೂರೈಕೆ ಮಾಡುತ್ತಿದೆ. ಭೂಮಿ ರಿಯಲ್ ಎಸ್ಟೇಟ್ ಕುಳಗಳ ಪಾಲಾದರೆ ಅಷ್ಟೂ ಹಾಲಿನ ಉತ್ಪಾದನೆ ನಿಂತು ಹೋಗಲಿದೆ ಎಂದು ರಮೇಶಗೌಡ ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷ ಟಿ.ತಿಮ್ಮೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹೆಚ್.ಸಿ.ಕೃಷ್ಣ, ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ನಟರಾಜ್ ಗಂಗಾಧರ್ ಹಾಗೂ ಗ್ರೇಟರ್ ಬೆಂಗಳೂರು ಮಹಾಪ್ರಧಾನ ಕಾರ್ಯದರ್ಶಿ ಎಸ್.ರಮೇಶ ಮುಂತಾದವರು ಇದ್ದರು.














