ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಆರೋಗ್ಯ ವಿಜ್ಞಾನ ಕಾಲೇಜುಗಳಿವೆ. ಪ್ರತಿ ವರ್ಷ 72 ಸಾವಿರ ಆರೋಗ್ಯ ವಿಜ್ಞಾನ ಪದವೀಧರರನ್ನು ನೀಡುತ್ತಿದೆ. ವರ್ಷಕ್ಕೆ 13,940 ವೈದ್ಯರು ಪದವಿ ಪೂರೈಸುತ್ತಾರೆ ಎಂದು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಜಿಕೆವಿಕೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಆರೋಗ್ಯ ಕ್ಷೇತ್ರದ ವಿವಿಧ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ಇಲ್ಲಿ ತಯಾರಾದ ಅತ್ಯುತ್ತಮ ವೈದ್ಯರು, ಆರೋಗ್ಯ ವೃತ್ತಿಪರರು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿಯೂ ನಮ್ಮ ರಾಜ್ಯ ಮುಂದಿದೆ. ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರಿದ್ದಾರೆ. ಮಾತ್ರವಲ್ಲ, ಇತರೆ ಕ್ಷೇತ್ರಗಳಲ್ಲಿಯೂ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ನಮ್ಮ ರಾಜ್ಯ ಹೊಂದಿದೆ ಎಂದು ತಿಳಿಸಿದರು.
ಬೆಂಗಳೂರು ಎಲ್ಲಾ ವಿಚಾರದಲ್ಲಿಯೂ ಜಾಗತಿಕ ಗಮನ ಸೆಳೆಯುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಾಗ ಒಂದು ಮಾತು ಹೇಳಿದ್ದರು. ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು, ನಂತರ ದೇಶದ ಇತರೆ ಭಾಗಗಳಿಗೆ ಹೋಗುತ್ತಿದ್ದರು. ಈಗ ಕಾಲ ಬದಲಾಗಿದೆ, ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ಭಾಗಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ಈ ಮಾತು ಇದೀಗ ಸತ್ಯವಾಗಿದೆ ಎಂದರು.
ಕಣ್ಣಿಗೆ ಕಾಣುವ ದೇವರು-ವೈದ್ಯರು:
ವೈದ್ಯರು ಕಣ್ಣಿಗೆ ಕಾಣುವ ದೇವರು. ಜನ ಎಷ್ಟೇ ಕಷ್ಟ ಇದ್ದರೂ ಬಹಳ ನಂಬಿಕೆ ಹಾಗೂ ವಿಶ್ವಾಸದಿಂದ ವೈದ್ಯರ ಬಳಿ ಬರುತ್ತಾರೆ. ನೀವು ಅವರ ನಂಬಿಕೆ ಉಳಿಸಿಕೊಂಡು ಹೋಗಬೇಕು. ಈ ವೃತ್ತಿಯಲ್ಲಿ ನಿಮಗೆ ನಿತ್ಯ ಸವಾಲು ಎದುರಾಗುತ್ತದೆ. ನಿಮ್ಮ ಮುಂದೆ ದೊಡ್ಡ ಸ್ಪರ್ಧೆ ಇದೆ. ನಾನು ಬೇರೆ ದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಭಾರತೀಯರು ಅದರಲ್ಲೂ ಕರ್ನಾಟಕದ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿರುವ ಗುಣಮಟ್ಟ ಭಾರತ ಮಾತ್ರವಲ್ಲ, ವಿಶ್ವದಲ್ಲೇ ಎಲ್ಲೂ ಇಲ್ಲ. ಇಲ್ಲಿ ತಯಾರಾದ ವೈದ್ಯರ ಪ್ರತಿಭೆ, ಗುಣಮಟ್ಟ, ಸೇವೆ ಹಾಗೂ ಬದ್ಧತೆಗೆ ಸರಿಸಾಟಿ ಯಾರೂ ಇಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ:
ಭಾರತ ಈಗ ಸಾಮಾಜಿಕ ಹಾಗೂ ತಂತ್ರಜ್ಞಾನ ಪರಿವರ್ತನೆಯ ತಿರುವಿನಲ್ಲಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಅವಿಷ್ಕಾರ ಕಂಡಿದೆ. ಆದರೆ ವೈದ್ಯರು ಕೇವಲ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವುದರ ಬಗ್ಗೆ ಮಾತ್ರ ಗಮನ ಹರಿಸಬಾರದು. ಗ್ರಾಮೀಣ ಪ್ರದೇಶದಲ್ಲೂ ಆರೋಗ್ಯ ಸೇವೆ ಒದಗಿಸುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.
ಗುಣಮಟ್ಟದ ಶಿಕ್ಷಕರೇ ವಿವಿಯ ಹೆಗ್ಗುರುತು:
ಯಾವುದೇ ಒಂದು ವಿವಿಯ ಶಕ್ತಿ ಎಂದರೆ ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲ, ಪದವಿಗಳ ಸಂಖ್ಯೆಯೂ ಅಲ್ಲ, ಅಲ್ಲಿರುವ ಗುಣಮಟ್ಟದ ಶಿಕ್ಷಕರು. ಅವರುಗಳು ವಿದ್ಯಾರ್ಥಿಗಳ ಮಾರ್ಗದರ್ಶಕರಾಗಬೇಕು, ಸಂಶೋಧನೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಗಳಾಗಿರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜತೆಯಾಗಿ ಕೆಲಸ ಮಾಡೋಣ. ಮುಂದೆ ನಾವು ನೀವೆಲ್ಲರೂ ರಾಮನಗರದ ಕ್ಯಾಂಪಸ್ ನಲ್ಲಿ ಸಿಗೋಣ. ಕರ್ನಾಟಕ ಸರ್ಕಾರ ಈ ವಿವಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ಮೊದಲ ಘಟಿಕೋತ್ಸವ:
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಾನು ಭಾಗವಹಿಸಿರುವ ಮೊದಲ ಘಟಿಕೋತ್ಸವ ಇದು. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ. ಹೀಗಾಗಿ ಶೈಕ್ಷಣಿಕ ಅಭಿವೃದ್ಧಿ, ಅದರಲ್ಲೂ ವೈದ್ಯಕೀಯ ಶಿಕ್ಷಣದ ಅಭಿವೃದ್ಧಿಯ ಬಗ್ಗೆ ನಾನು ಬಹಳ ಉಸ್ತುಕನಾಗಿದ್ದೀನೆ. ನಾನು ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಪ್ರವೇಶಿಸಿದ ಕಾರಣ ಪದವಿ ಪಡೆಯಲು ಆಗಿರಲಿಲ್ಲ. 2008ರಲ್ಲಿ 47 ವರ್ಷವಾದಾಗ ಮೈಸೂರು ವಿವಿಯಿಂದ ಪದವಿ ಪಡೆದೆ. ಆ ಕ್ಷಣ ಈಗಲೂ ನೆನಪಿದೆ. ಅದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಬಂಗಾರಪ್ಪ, ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾಗಿದ್ದೆ. ಆದರೆ ಪದವಿ ಪಡೆದಾಗ ಆದಾಗ ಆದ ಸಂತೋಷ ಬೇರೆ ಯಾವಾಗಲೂ ಆಗಿರಲಿಲ್ಲ ಎಂದು ಸಂತಸವನ್ನು ಹಂಚಿಕೊಂಡರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ:
ಘಟಿಕೋತ್ಸವದಲ್ಲಿ ಆರೋಗ್ಯ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ. ಪದವಿಗಳನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಘಟಿಕೋತ್ಸವದ ವಿಶೇಷ ಆಕರ್ಷಣೆಯಾಗಿ, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಮೂವರು ಗಣ್ಯರಾದ ನೈಲಾಡಿ ಶ್ರೀಧರ್ ಶೆಟ್ಟಿ, ಹರ್ಷಂಗಿ ವೀರಭದ್ರಪ್ಪ, ಎ. ಸಿ. ಶಣ್ಮುಗಂ ಅವರುಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.
103 ವಿದ್ಯಾರ್ಥಿಗಳಿಗೆ ಚಿನ್ನದ ಪದಕ:
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ವಿವಿಧ ವಿಭಾಗಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ 103 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ನಿರಂತರ ಪರಿಶ್ರಮ, ಶೈಕ್ಷಣಿಕ ಮೇಲುಗೈ ಹಾಗೂ ಸಂಶೋಧನಾ ಸಾಧನೆಗಳಿಗಾಗಿ ಈ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 72 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಗಳನ್ನು ಪಡೆದರು. ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಮಾರಂಭದಲ್ಲಿ ಗವಹಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಕುಲಪತಿ ಡಾ ಭಗವಾನ್ ಬಿ.ಸಿ, ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ರಿಯಾಜ್ ಬಾಷಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.














