ಬೆಳಗಾವಿ: ನಗರದ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಪ್ರೋತ್ಸಾಹ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಸಮಗಾರ ಹರಳಯ್ಯ (ಚರ್ಮಗಾರ) ಸಮಾಜದ ಸಮಾವೇಶದಲ್ಲಿ ಚರ್ಮೋದ್ಯಮ ಕ್ಷೇತ್ರದಲ್ಲಿ ನೀಡಿದ ಮಹತ್ವದ ಸೇವೆಯನ್ನು ಗುರುತಿಸಿ ಪ್ರಲ್ಹಾದ ಪಾಂಡವ ಅವರಿಗೆ ಚರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಅವರ ಧರ್ಮಪತ್ನಿ ತುಳಸಾಬಾಯಿ ಪಾಂಡವ ಅವರನ್ನೂ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾದ ಅಧ್ಯಕ್ಷ ಭೀಮರಾವ ಪವಾರ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾದರಕ್ಷೆ ಹಾಗೂ ಚರ್ಮ ಉದ್ಯೋಗವನ್ನು ಅಭಿವೃದ್ಧಿಪಡಿಸಲು ನವೀನ ತಂತ್ರಜ್ಞಾನ, ಉತ್ತಮ ವಿನ್ಯಾಸ ಹಾಗೂ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಸರಿಯಾದ ಯೋಜನೆ, ಪರಿಶ್ರಮ ಹಾಗೂ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಚರ್ಮ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರ್ಗಿ, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅನ್ನಾಸಾಹೇಬ ಎಸ್. ರಾಯಮಾನೆ, ಮಾರಿಷಸ್ನ ಅನ್ನಾ ಮೆಡಿಕಲ್ ಕಾಲೇಜಿನ ನಿವೃತ್ತ ಡೀನ್ ಡಾ. ಮೋಹನ್ ಉಳ್ಳಿಕಾಶಿ, ಬೆಳಗಾವಿ ಪೊಲೀಸ್ ಉಪ ಆಯುಕ್ತ ಸದಾಶಿವ ಕಟ್ಟಿಮನಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲೆದರ್ ಆರ್ಟಿಸನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಅಧ್ಯಕ್ಷ ಸಂತೋಷ ಹೊಂಗಲ, ವಾಸುದೇವ ದೊಡ್ಡಮನಿ, ಸಾಗರ ಕಿತ್ತೂರು, ಚಂದ್ರಕಾಂತ ಲೋಕರೆ, ಡಾ. ಶಿವಾನಂದ ದೊಡ್ಡಮನಿ, ಮಲ್ಲಿಕಾರ್ಜುನ ತಾಳಿಕೋಟಿ, ಶಂಕರ ಕಾಂಬಳೆ, ರೂಪಾಲಿ ಸಂತೋಷಕುಮಾರ್ ಡಿ, ರವಿ ಹೊಂಗಲ, ಡಾ. ಚಂದ್ರಕಾಂತ ವಾಘಮಾರೆ, ಆನಂದ ಸೌದತ್ತಿ, ಹೀರಾಲಾಲ್ ಚವ್ಹಾಣ, ಸಂಜೀವ ಲೋಕಾಪುರ, ಜಿ.ಬಿ. ವಾಘಮಾರೆ, ಲತಾ ಮಾನೆ , ರೇಖಾ ದೊಡಮನಿ, ಸಂಗೀತಾ ಸಾಂಗಲಿ ಸೇರಿದಂತೆ ಅನೇಕ ಗಣ್ಯರು ಹಾಗೂ ಬಹುಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ತಾಳಿಕೋಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುರೇಶ್ ಸಾಂಗಲಿ ವಂದಿಸಿದರು.















