ಬೆಳಗಾವಿ: ನಗರದಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಮೇಜರ್ ಇರಿಗೇಶನ್) ಇಲಾಖೆಯ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಅಂಧಾ ದರ್ಬಾರ್ ನಡೆಯುತ್ತಿದೆ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಆರೋಪಿಸುತ್ತಿದ್ದಾರೆ.

ಇಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಚೇರಿಗೆ ಬರುವುದಕ್ಕೆ ಯಾವುದೇ ಹೊತ್ತು ಗೊತ್ತಿಲ್ಲ. ಯಾರೋ ಯಾವಾಗಲೋ ಬರುತ್ತಾರೆ, ಯಾವಾಗಲೋ ಹೋಗುತ್ತಾರೆ. ಸುಮಾರು ಅರ್ಧ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊತ್ತುಕೊಂಡಿರುವ ಬೆಳಗಾವಿಯ ಈ ಕಚೇರಿ ಸಿಬ್ಬಂದಿಯ ಬೇಕಾಬಿಟ್ಟಿ ವರ್ತನೆಯಿಂದ ಸರ್ಕಾರದ ಯೋಜನೆಗಳು ಸಕಾಲದಲ್ಲಿ ಅನುಷ್ಠಾನ ಆಗುವುದಾದರೂ ಹೇಗೆ? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಬೆಳಗಾವಿಯ ಈ ನೀರಾವರಿ ಇಲಾಖೆ ಕಚೇರಿ ಸಿಬ್ಬಂದಿಯ ತುಘಲಕ್ ದರ್ಬಾರಿಗೆ ಕಡಿವಾಣ ಹಾಕುವುದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಆರಾಮವಾಗಿ ಸರ್ಕಾರಿ ಸಂಬಳ ಸವಲತ್ತುಗಳನ್ನು ತಗೊಂಡು ಮೋಜಿನ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯ ಪ್ರಭಾವಿ ಸಚಿವರು, ಜಿಲ್ಲಾಧಿಕಾರಿಯವರು, ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಇತ್ತ ಒಂದಿಷ್ಟು ಗಮನಹರಿಸಿ ಇಲ್ಲಿನ ಸಿಬ್ಬಂದಿಗೆ ಚಾಟಿ ಬೀಸಬೇಕಿದೆ.















