ಬೆಂಗಳೂರು: ಮಧುಮೇಹದಿಂದ ಉಂಟಾಗುವ ಪಾದದ ಹಾಗೂ ಕಾಲಿನ ಹುಣ್ಣುಗಳು ಸುಮಾರು ಐದು ವರ್ಷದಲ್ಲಿ ಗ್ಯಾಂಗ್ರಿನ್ ಆಗಿ ಪರಿಣಮಿಸುತ್ತವೆ. ಈ ವೇಳೆ ಕಾಲನ್ನು ಕತ್ತರಿಸಿ ತೆಗೆಯುವುದು ಅನಿವಾರ್ಯವಾಗಿದೆ. ಆದರೆ ಈ ಪ್ರಕ್ರಿಯೆಯನ್ನು ತಪ್ಪಿಸಿ, ಇತರ ಮಾರ್ಗೋಪಾಯಗಳ ಕುರಿತು ಆಲೋಚಿಸುವ ಸಂದರ್ಭ ಇದಾಗಿದೆ ಎಂದು ಇಂಡಿಯನ್ ಪೊಡಾಟ್ರಿ ಅಸೋಸಿಯೇಷನ್ ಅಧ್ಯಕ್ಷ ಎಪಿಎಸ್ ಸೂರಿ ಅಭಿಪ್ರಾಯಪಟ್ಟರು.
ಶನಿವಾರ ವಿಕ್ಟೋರಿಯಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಇಂಡಿಯನ್ ಪೊಡಾಟ್ರಿ ಅಸೋಸಿಯೇಷನ್ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಧುಮೇಹದಿಂದ ಪಾದ ಹಾಗೂ ಕಾಲುಗಳ ರಕ್ಷಣೆ ಕುರಿತು ಆಯೋಜಿಸಿದ್ದ ಇಪೆಕಾನ್- 2026 ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಪಾದ ಅಥವಾ ಗಾಯಗಳಿಗೆ ತುತ್ತಾದ ಶೇಕಡ 72 ರಷ್ಟು ಮಧುಮೇಹಿಗಳು ಕಾಲನ್ನು ಕತ್ತರಿಸಿ ತೆಗೆಯುವ ಹಂತಕ್ಕೆ ಬಂದು ತಲುಪುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ಕೃತಕ ಕಾಲುಗಳನ್ನು ಬಳಸಿಕೊಂಡು ಓಡಾಡುವ ಅನಿವಾರ್ಯತೆಗೆ ತುತ್ತಾಗುತ್ತಾರೆ ಈ ಪ್ರಕ್ರಿಯೆಯನ್ನು ತಪ್ಪಿಸುವುದೇ ಸಮ್ಮೇಳನದ ಉದ್ದೇಶವಾಗಿದೆ ಎಂದು ವಿವರಿಸಿದರು.
21 ರಾಜ್ಯಗಳಲ್ಲಿ ಇಂಡಿಯನ್ ಪೊಡಾಟ್ರಿ ಅಸೋಸಿಯೇಷನ್ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್, ದೆಹಲಿ, ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಧುಮೇಹದಿಂದ ಕಾಲು ಕತ್ತರಿಸಿ ತೆಗೆಯುವ ದುಷ್ಪರಿಣಾಮದ ಕುರಿತು ವಿಚಾರ ಸಂಕಿರಣ, ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಆಯೋಜಕರು ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಕ್ಯಾಶುಯಲ್ಟಿ ಮೆಡಿಕಲ್ ಆಫೀಸರ್ ಡಾ. ಶಿವಕುಮಾರ ಅವರು ಮಾತನಾಡಿ, 10 ರಿಂದ 15 ವರ್ಷಗಳ ಕಾಲ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪಾದ ಅಥವಾ ಕಾಲುಗಳಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಗಾಯಗಳು ಕಾಣಿಸಿಕೊಂಡ ಸರಿಸುಮಾರು ಐದು ವರ್ಷಗಳ ನಂತರ ಇಡೀ ಕಾಲು ಗ್ಯಾಂಗ್ರಿನ್ ಗೆ ತುತ್ತಾಗುತ್ತದೆ. ಇದರಿಂದ ಕಾಲುಗಳನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಪರಿಸ್ಥಿತಿಯನ್ನು ತಡೆಗಟ್ಟಿ, ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಕಡೆಗೆ ಇಂದಿನ ಕಾರ್ಯಕ್ರಮ ದಿಟ್ಟ ಹೆಜ್ಜೆಯಾಗಿದೆ ಎಂದು ನುಡಿದರು.
ಐ ಪ್ರಿವೆಂಟ್ ಅಂಪುಟೇಷನ್ ಎನ್ನುವುದು ಇಂಡಿಯನ್ ಪೊಡಾಟ್ರಿ ಅಸೋಸಿಯೇಷನ್ ನ ಘೋಷವಾಕ್ಯವಾಗಿದೆ. ಪ್ರಪಂಚದಲ್ಲಿನ ಮಧುಮೇಹಿಗಳ ರಾಜಧಾನಿ ಭಾರತ ಎನ್ನುವಂತಾಗಿದೆ. ಅದರಲ್ಲೂ ಬೆಂಗಳೂರು ಡಯಾಬಿಟಿಕ್ ರೋಗಿಗಳ ತವರೂರು ಎನ್ನುವ ಹಣೆಪಟ್ಟಿಯನ್ನು ಹೊತ್ತಿದೆ. ಇದನ್ನು ತೊಡೆದು ಹಾಕಲು ಸಂಸ್ಥೆ ಪಣತೊಟ್ಟಿದ್ದು, ಇಂದಿನ ವಿಚಾರ ಸಂಕಿರಣ ಉದ್ದೇಶಕ್ಕೆ ಪೂರಕವಾದ ಉತ್ತರಗಳನ್ನು ನೀಡಿದೆ ಎಂದು ವ್ಯಾಖ್ಯಾನಿಸಿದರು.
ಬೆಂಗಳೂರು ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ, ವಿಕ್ಟೋರಿಯಾ ಆಸ್ಪತ್ರೆಯ ಶಾಸ್ತ್ರಚಿಕಿತ್ಸಕರಾದ ಮಂಜುನಾಥ್ ಬಿ.ಡಿ ಮಾತನಾಡಿ, ಇಂದಿನ ವಿಚಾರ ಸಂಕಿರಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಭಾಗವಹಿಸಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಬಿ. ಎಲ್ ಸುಜಾತಾ ರಾಥೋಡ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು ಎಂದು ಮಾಹಿತಿ ನೀಡಿದರು.














