ಬೆಂಗಳೂರು: ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಭರತ ಕಲಾಗ್ರಾಮ ಸಂಸ್ಥೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ನೃತ್ಯ ವಸಂತಂ ಕಾರ್ಯಕ್ರಮ ಸಂಪನ್ನಗೊಂಡಿದೆ.
ಸಂಸ್ಥೆಯ ನೇತೃತ್ವ ವಹಿಸಿರುವ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ವಸಂತ್ ಕಿರಣ್ ಅವರು ಮಾದ್ಯಮಗಳ ಜೊತೆ ಕಾರ್ಯಕ್ರಮದ ಕುರಿತು ಮಾತನಾಡಿದರು. ಬಂಗಾರಪೇಟೆಯಲ್ಲಿರುವ ನಮ್ಮ ಗುರುಕುಲದವತಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ಕಲಾ ಉತ್ಸವ ಆಯೋಜನೆಗೊಂಡಿತ್ತು. ಮೊದಲ ವರ್ಷ 50 ಮಕ್ಕಳಿಂದ ಪ್ರಾರಂಭವಾಗಿ, ಈ ಬಾರಿ ದೇಶ-ವಿದೇಶಗಳ ಸುಮಾರು 250ಕ್ಕೂ ಹೆಚ್ಚು ಬಾಲ ನೃತ್ಯಗಾರರು ಭಾಗವಹಿಸಿ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸುವ ಮಟ್ಟಕ್ಕೆ ಬೆಳೆದಿದೆ ಎಂದು ತಿಳಿಸಿದರು.
ಮುಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ವಿಸ್ತರಿಸಿ 500ಕ್ಕೂ ಹೆಚ್ಚು ಕಲಾವಿದರನ್ನು ಒಂದೇ ವೇದಿಕೆಗೆ ತರುವ ಯೋಜನೆ ಹೊಂದಲಾಗಿದೆ. ಭಾರತದ ಪ್ರಸಿದ್ಧ ಪದ್ಮಶ್ರೀ ಪುರಸ್ಕೃತ ದಿಗ್ಗಜರುಗಳಾದ ಜಯರಾಮ ರಾವ್, ವನಶ್ರೀ ರಾಮ ರಾವ್, ಮುತ್ತು ಕಣ್ಣಮ್ಮಾಳ್, ವಿಮಲಾ ಮೆನನ್ ಹಾಗೂ ಮೈಸೂರಿನ ಹಿರಿಯ ನೃತ್ಯ ಪಟು ಗುರು ವಸುಂಧರಾ ದೊರೆಸ್ವಾಮಿ ಅವರಂತಹ ಮೇರು ವ್ಯಕ್ತಿಗಳು ಉತ್ಸವಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿದ್ದಾರೆ. ಅವರುಗಳಿಗೆ ಗುರು ಸತ್ಕಾರ ಗೌರವವನ್ನು ಸಮರ್ಪಿಸಲಾಗಿದೆ. ಕಲಾ ಪೋಷಣೆ ಹಾಗೂ ಗುರು-ಶಿಷ್ಯ ಪರಂಪರೆಯನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರತಿವರ್ಷ ಭಾರತದ ವಿವಿಧ ನೃತ್ಯ ಶೈಲಿಗಳನ್ನು ಪರಿಚಯಿಸುವ ಪರಂಪರೆಯಂತೆ, ಈ ಬಾರಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಮಂಗಳೂರಿನ ಕೃಷ್ಣಮೂರ್ತಿ ತುಂಗಾ ಮತ್ತು ತಂಡದವರು ಯಕ್ಷಗಾನ ಪ್ರದರ್ಶನವನ್ನು ನೀಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಬಂದಿದ್ದ ತಜ್ಞ ತೀರ್ಪುಗಾರರು ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದರು. ಆಯ್ಕೆಯಾದ ಮಕ್ಕಳಿಗೆ ಗಣ್ಯರಾದ ರೇವತಿ ಕಾಮತ್, ರೇವತಿ ರಾಮಚಂದ್ರನ್ ಮತ್ತು ತಿರುಪತಿಯ ಡಾ. ಉಮಾ ಮುದ್ದುಬಾಲ ಪ್ರಶಸ್ತಿಗಳನ್ನು ವಿತರಿಸಿದರು ಎಂದು ಹೇಳಿದರು.
ಆರು ವರ್ಷದ ಮಗುವಿನಿಂದ ಹಿಡಿದು 65 ವರ್ಷದ ಹಿರಿಯ ಕಲಾವಿದರವರೆಗೂ ನೃತ್ಯ ಪ್ರದರ್ಶನಕ್ಕೆ ಸಮಾನ ವೇದಿಕೆ ಕಲ್ಪಿಸುವುದು ಮತ್ತು ಸೋಲು-ಗೆಲುವಿಗಿಂತ ಕಲಿಕೆಗೆ ಆದ್ಯತೆ ನೀಡುವುದು ಸಂಸ್ಥೆಯ ಆಶಯವಾಗಿದೆ ಎಂದು ಡಾ. ವಸಂತ್ ಕಿರಣ್ ತಿಳಿಸಿದರು.














