ಬೆಂಗಳೂರು: ರಾಜ್ಯ ಅಪೆಕ್ಸ್ ಬ್ಯಾಂಕ್‌ನ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಈ ಪ್ರಕ್ರಿಯೆಗೆ ಚಾಲನೆ ನೀಡಿದ ಡಿ. ಕೆ. ಶಿವಕುಮಾರ್ ಅವರ ಇಚ್ಛೆಯಂತೆ ಪಾರದರ್ಶಕವಾಗಿ ಚುನಾವಣೆ ನಡೆಸಲಾಗಿದೆ ಎಂದು ಬ್ಯಾಂಕ್ ನೂತನ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಎಸ್. ರವಿ ತಿಳಿಸಿದರು.
ಶಾಸಕರ ಭವನದಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳ ಅಭಿನಂದನೆ ಸ್ವೀಕರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಹಕಾರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸುಮಾರು 19 ಜನ ನಿರ್ದೇಶಕರನ್ನು ಒಳಗೊಂಡಿದೆ. ಇದರಲ್ಲಿ ಹಿರಿಯ ನಾಯಕರು, ಮಾಜಿ ಮಂತ್ರಿಗಳು, ಹಾಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ನಿರ್ದೇಶಕರಾಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ಪಕ್ಷಾತೀತವಾಗಿ ನನ್ನನ್ನು ನೂತನ ಅಧ್ಯಕ್ಷನನ್ನಾಗಿ ಹಾಗೂ ಉಪಾಧ್ಯಕ್ಷರನ್ನಾಗಿ ಪರಿಷತ್ ಸದಸ್ಯ, ರಾಯಚೂರಿನ ಶರಣಗೌಡ ಪಾಟೀಲ್ ಬಯ್ಯಾಪುರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಅವಿರೋಧ ಆಯ್ಕೆಗೆ ಸಹಕರಿಸಿದ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್, ಸಹಕಾರ ಸಚಿವರಾದ ಲಕ್ಷ್ಮಣ್ ಸವದಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕರುಗಳಾದ ಎಸ್. ಟಿ. ಸೋಮಶೇಖರ್, ರಮೇಶ್ ಬಂಡಿಸಿದ್ದೇಗೌಡ, ಶರತ್ ಬಚ್ಚೇಗೌಡ, ಬಾಲಕೃಷ್ಣ ಮತ್ತು ಹೈಕಮಾಂಡ್ ಮುಖಂಡರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಅಪೆಕ್ಸ್ ಬ್ಯಾಂಕ್ ಮುಖ್ಯವಾಗಿ ರೈತರ ಕೃಷಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡುವ ಪ್ರಮುಖ ಸಂಸ್ಥೆಯಾಗಿದೆ. ಸಂಸ್ಥೆಯನ್ನು ದಕ್ಷ ರೀತಿಯಲ್ಲಿ ಮುನ್ನಡೆಸಿ, ಸಾಲ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಲಾಗುವುದು. ಠೇವಣಿದಾರರ ನಂಬಿಕೆಯನ್ನು ಉಳಿಸಿಕೊಳ್ಳುವುದು ನೂತನ ಆಡಳಿತ ಮಂಡಳಿಯ ಮುಖ್ಯ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಹಾಗೂ ಸಹಕಾರ ಸಚಿವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಅನ್ನು ಇನ್ನಷ್ಟು ಬಲಪಡಿಸಲು ಶ್ರಮಿಸಲಾಗುವುದು ಎಂದು ಎಸ್. ರವಿ ಹೇಳಿದರು.














