ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ನೂತನ ಅಧ್ಯಕ್ಷರಾಗಿ ಶಾಸಕ ಜಿ.ಟಿ ದೇವೇಗೌಡ ಹಾಗೂ ಉಪಾಧ್ಯಕ್ಷರಾಗಿ ಬಿ.ಕೆ. ಶಿವಕುಮಾರ್ ಶುಕ್ರವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೈಸೂರು ವಿಭಾಗದಿಂದ ಜಿ.ಟಿ. ದೇವೇಗೌಡ, ಬಿ.ಸಿ.ಲೋಕಪ್ಪಗೌಡ, ಬಿ.ಶಶಿಕುಮಾರ್ ರೈ. ಬೆಂಗಳೂರು ವಿಭಾಗದಿಂದ ಎಚ್.ಎನ್ ಅಶೋಕ, ಬಿ.ಕೆ. ಶಿವಕುಮಾರ್, ಕೆ.ಪಿ. ಚನ್ನಬೈರೇಗೌಡ, ಕೆ. ಸುನೀಲ್, ಬೆಳಗಾವಿ ವಿಭಾಗದಿಂದ ಜಗದೀಶ್ ಎಂ. ಕವಟಗಿಮಠ, ಕಾಶಿಲಿಂಗ ಬಿ. ಹುಡೇದ, ಕೃಷ್ಣಗೌಡ ಪಾಟೀಲ್, ಕಲಬುರಗಿ ವಿಭಾಗದಿಂದ ಜೆ.ಎಂ. ಶಿವಪ್ರಸಾದ್, ಅಭಿಷೇಕ ಆರ್. ಪಾಟೀಲ್, ವಿಶ್ವನಾಥರೆಡ್ಡಿ ಎಸ್. ದರ್ಶನಾಪೂರ ಆಯ್ಕೆಯಾಗಿದ್ದಾರೆ. ಇತರೆ ಸಹಕಾರ ಸಂಸ್ಥೆಗಳ ಕ್ಷೇತ್ರದಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಚುನಾಯಿತರಾಗಿದ್ದಾರೆ.
ಈ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ ಜಿ.ಟಿ ದೇವೇಗೌಡ ಅವರು, ರಾಜ್ಯದ 48 ಸಾವಿರಕ್ಕೂ ಅಧಿಕ ಸಹಕಾರ ಸಂಸ್ಥೆಗಳ ಮಾತೃ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಕಳೆದ 102 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಹಕಾರ ಮಹಾಮಂಡಳದ ಎಲ್ಲ ಕಾರ್ಯಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಲಕ್ಷ್ಮಣ ಸವದಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಅನಗತ್ಯ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಅವುಗಳನ್ನು ಸ್ವಾಯತ್ತ ಮತ್ತು ಆರ್ಥಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಸಹಕಾರ ಕ್ಷೇತ್ರ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಕ್ಷೇತ್ರವಲ್ಲ. ರಾಜ್ಯದ ಸಾವಿರಾರು ಸಹಕಾರಿ ಸಂಸ್ಥೆಗಳು ರೈತರು, ಮಹಿಳೆಯರು, ಕಾರ್ಮಿಕರು, ಗ್ರಾಹಕರು, ಮಧ್ಯಮ ವರ್ಗ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಆರ್ಥಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿವೆ. ಹೀಗಾಗಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು.
ಸಹಕಾರಿ ಬ್ಯಾಂಕ್‌ಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹೌಸಿಂಗ್ ಸೊಸೈಟಿಗಳು, ಗ್ರಾಹಕರ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಂಘಗಳು ಸೇರಿದಂತೆ ವಿವಿಧ ವಲಯಗಳ ಸಹಕಾರಿ ಸಂಸ್ಥೆಗಳು ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇನ್ನು ಸಹಕಾರಿ ಮಹಾಮಂಡಳ ಕೇವಲ ಆಡಳಿತಾತ್ಮಕ ಸಂಸ್ಥೆಯಲ್ಲ. ಸಹಕಾರ ಶಿಕ್ಷಣ, ತರಬೇತಿ ಹಾಗೂ ಸಹಕಾರ ಚಳವಳಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಸದಸ್ಯರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಸಹಕಾರಿ ಕಾನೂನು, ಆರ್ಥಿಕ ವ್ಯವಸ್ಥೆ, ಆಡಳಿತ ಮತ್ತು ಮಾರುಕಟ್ಟೆ ವ್ಯವಸ್ಥೆಯ ಕುರಿತು ತರಬೇತಿ ನೀಡುತ್ತಿದೆ ಎಂದು ಹೇಳಿದರು.
ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ್ ಮಾತನಾಡಿ, ಹಿರಿಯ ಸಹಕಾರಿಗಳ ಮಾರ್ಗದರ್ಶನ ಹಾಗೂ ಎಲ್ಲರ ಒಮ್ಮತದ ಸಹಕಾರದಿಂದ ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ಇದೇ ಒಗ್ಗಟ್ಟು ಮತ್ತು ಸಹಕಾರಿ ಮನೋಭಾವದಿಂದ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಅಧ್ಯಕ್ಷ ಜಿ.ಟಿ. ದೇವೇಗೌಡ ಅವರ ಮಾರ್ಗದರ್ಶನದೊಂದಿಗೆ ಹಾಗೂ ಸಹಕಾರಿ ಕ್ಷೇತ್ರದ ಎಲ್ಲ ಸದಸ್ಯರ ಸಹಕಾರ ಪಡೆದು ಮಾತೃಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಸಂಸ್ಥೆಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.














