ಡಾ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ಸಾಕಷ್ಟು ಪರಿಣಾಮ ಬೀರಿದ್ದಾರೆ: ಡಾ.ಜಿ.ಪರಮೇಶ್ವರ್

WhatsApp
Telegram
Facebook
Twitter
LinkedIn

ಬೆಂಗಳೂರು: ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಸಾಕಷ್ಟು ಪರಿಣಾಮ ಬೀರಿದ್ದರಿಂದ ಅವರನ್ನು ಗೌರವಿಸುವ ಸಲುವಾಗಿ ಹುಟ್ಟುಹಬ್ಬವನ್ನು ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಅಂಗವಾಗಿ ಶಾಲಾ‌ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಸೂರಿನಲ್ಲಿ ಪ್ರಾದ್ಯಾಪಕರಾಗಿದ್ದ ರಾಧಾಕೃಷ್ಣನ್ ಅವರನ್ನು ಒಮ್ಮೆ ಅವರ ವಿದ್ಯಾರ್ಥಿಗಳು ಇಂದು ನಿಮ್ಮ ಜನ್ಮದಿನ ಆಚರಿಸಬೇಕು ಎಂದು ಕೇಳುತ್ತಾರೆ. ನನ್ನ ಜನ್ಮದಿನ ಆಚರಿಸುವ ಬದಲು ಶಿಕ್ಷಕರ ದಿನಾಚರಣೆಯಾಗಿ ಅಚರಿಸುವಂತೆ ತಿಳಿಸುತ್ತಾರೆ. ಆದ್ದರಿಂದ ಅವರಿಗೆ ಗೌರವ ಸೂಚಿಸುವ ಸಲುವಾಗಿ ಇಡೀ ಶಿಕ್ಷಕ ಸಮುದಾಯವನ್ನು ಇಂದು ಗೌರವಿಸಲಾಗುತ್ತಿದೆ ಎಂದು ಶಿಕ್ಷಕರ ದಿನದ ಇತಿಹಾಸವನ್ನು ನೆನಪಿಸಿದರು.

ಕೋಟ್ಯಂತರ ಶಿಕ್ಷಕರು ದೇಶವನ್ನು ಕಟ್ಟಿ ಹೋಗಿದ್ದಾರೆ. ಈಗಲೂ ಆ ಕೆಲಸ ಮುಂದುವರೆದಿದೆ. ಹಾಗಾಗಿ ಈ ಸಂದರ್ಭದಲ್ಲಿ ಶಿಕ್ಷಕ ಸಮುದಾಯಕ್ಕೆ ಕೋಟಿಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ ನೀಡುವ ಕೆಲಸ ಆರಂಭಿಸಿದ್ದು, ಮಹಾನ್ ವ್ಯಕ್ತಿ ಜ್ಯೋತಿಬಾ ಫುಲೆ ಅವರು. ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಟ್ಟಂತಹ ತೊಂದರೆಗಳು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ.‌ ಅವರು ಸಂಕಲ್ಪ ಮಾಡಿ 1845ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಪರ್ಷಿಯನ್ ಶಿಕ್ಷಕ ಗಫರ್ ಖಾನ್ ಎನ್ನುವವರು ಫುಲೆ ದಂಪತಿಗಳಿಗೆ ಆಶ್ರಯ ನೀಡಿದ್ದ ಕತೆ ಸ್ಮರಣೀಯ ಎಂದು ಹೇಳಿದರು.

ಗುರುವೆ ಜ್ಞಾನದ ಬೆಳಕು, ಗುರುವೆ ಬದುಕಿನ ದಾರಿ, ಗುರುವೆ ಯಶಸ್ಸಿನ ಮೆಟ್ಟಿಲು ಎಂದು ಗುರುವಿಗೆ ಎಲ್ಲರಿಗಿಂತ ಶ್ರೇಷ್ಠ ಸ್ಥಾನ ಕೊಟ್ಟಿದ್ದೇವೆ. ಗುರುಗಳಿಗೆ ಭಾರತದಲ್ಲಿ ಕೊಟ್ಟಿರುವ ಸ್ಥಾನವನ್ನು ಜಗತ್ತಿನ ಬೇರೆ ಯಾವ ದೇಶದಲ್ಲೂ ಕೊಟ್ಟಿಲ್ಲ. ರಾಮಾಯಣ, ಮಹಾಭಾರತದಲ್ಲಿ ಗುರುವಿಗೆ ಏನೆಲ್ಲ ಗೌರವ ನೀಡಲಾಗಿತ್ತು ಎಂಬುದನ್ನು ಸಹ ನೋಡಬಹುದು. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಶಿಕ್ಷಣ ಇಡೀ ಮನುಷ್ಯನನ್ನು ಬದಲಾವಣೆ ಮಾಡುತ್ತದೆ. ಅನಕ್ಷರಸ್ಥರಾಗಿದ್ದರೆ ನಾವು ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು ಎಂದು ಊಹಿಸಿಕೊಳ್ಳಬೇಕು ಎಂದರು.

ಕಳೆದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಶಿಕ್ಷಣಕ್ಕೆ ಶೇ 11.50ರಷ್ಟು ಅನುದಾನ ನೀಡಿದ್ದಾರೆ.‌ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಶೇ. 2.8 ರಷ್ಟು ಅನುದಾನ ನೀಡುತ್ತಿದೆ. ಈ ಪ್ರಮಾಣ ಹೆಚ್ಚಾಗಬೇಕು.   ಪುಟ್ಟ ದೇಶ ದಕ್ಷಿಣ ಕೋರಿಯಾದಲ್ಲಿ ಜಗತ್ತಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪಿಹೆಚ್‌ಡಿ ಪಡೆಯುತ್ತಿದ್ದಾರೆ. ಶಿಕ್ಷಣದಿಂದಾಗಿ ಕಳೆದ ಇಪ್ಪತ್ತೈದು – ಮೂವತ್ತು ವರ್ಷದಲ್ಲಿ ಪ್ರಪಂಚದ ಭೂಪಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ದಕ್ಷಿಣ ಕೊರಿಯಾದ ಸ್ಥಾನವೇ ಬದಲಾಗಿದೆ. ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಇರುವುದರಿಂದ ಶಿಕ್ಷಣಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದರೆ ಜಗತ್ತನ್ನೇ ಆಳಲು ಸಾಧ್ಯವಿದೆ ಎಂದರು.

38 ವಿಶ್ವವಿದ್ಯಾಲಯಗಳು ಕರ್ನಾಟಕದಲ್ಲಿವೆ. ಯಾವ ವಿಶ್ವವಿದ್ಯಾಲವೂ ಆರೋಗ್ಯಕರವಾಗಿಲ್ಲ. ಯುಜಿಸಿ ಸಾಕಷ್ಟು ಅನುದಾನ ನೀಡುತ್ತಿಲ್ಲ. ಆದ್ಯತೆ ಯಾವುದರ ಮೇಲಿದೆ ಗೊತ್ತಾಗುತ್ತಿಲ್ಲ. ಇಡೀ ಸಮುದಾಯವನ್ನು ಪ್ರಗತಿಪರ ಚಿಂತನೆಗೆ ತೆಗೆದುಕೊಂಡು ಹೋಗಿ ದೇಶವನ್ನು ಅಭಿವೃದ್ಧಿ ಮಾಡುವುದರ ಮೇಲಿಲ್ಲ. ಶಿಕ್ಷಣ ಕ್ಷೇತ್ರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2.8ರಷ್ಟು ಅನುದಾನ ನೀಡುವುದಾದರೆ ಎಷ್ಟರ ಮಟ್ಟಿಗೆ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ರಾಧಾಕೃಷ್ಣನ್ ಅವರು ಇದ್ದಿದ್ದರೆ ದೇಶದ ಶಿಕ್ಷಣ ಕ್ಷೇತ್ರಕ್ಕೆ ಇಂದು ಸಿಗುತ್ತಿರುವ ಬಬೆಂಬಲ ನೋಡಿ ನೋವನ್ನು ಪಡುತ್ತಿದ್ದರು. ಇಡೀ ವಿಶ್ವವೇ ರಾಧಕೃಷ್ಣನ್ ಅವರನ್ನು ಗಮನಿಸಿತ್ತು. ಅಂತವರು ಬದುಕಿ ಬಾಳಿದ ಭಾರತದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡದೆ ಹೋದರೆ ದೇಶ ಅಧೋಗತಿಗೆ ಹೋಗುತ್ತದೆ. ಇಷ್ಟೆಲ್ಲದರ ನಡುವೆಯೂ ದೇಶ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಕರ್ನಾಟಕ ಶೇ. 80ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.

ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಾವು ಇನ್ನು ಅಭಿವೃದ್ಧಿ ಪಥದಲ್ಲಿ ಹಿಂದೆ ಉಳಿದಿದ್ದೇವೆ. ಕರ್ನಾಟಕದಲ್ಲಿ ಶೇ. 70ರಷ್ಟು ಬಿಪಿಎಲ್ ಕುಟುಂಬಗಳಿವೆ. ಹೀಗಿದ್ದರೆ ನಾವು ಮುಂದುವರಿದ ರಾಜ್ಯ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣವನ್ನು ದೇಶದ ಅಭಿವೃದ್ಧಿಯ ಅಳತೆ ಗೋಲಾಗಿ ನೋಡಲಾಗುತ್ತಿದೆ. ಕರ್ನಾಟಕದ ಮಟ್ಟಿಗೆ ನಮ್ಮ ರಾಜ್ಯದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆಗಳು ರಾಜ್ಯದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಅನುಕೂಲವಾಯಿತು. ಉತ್ತರ ಪ್ರದೇಶ, ಬಿಹಾರ ಇನ್ನು ಮುಂತಾದ ರಾಜ್ಯಗಳಲ್ಲಿ ಪ್ರಾಥಮಿಕ ಮತ್ತು ಉನ್ನತ ಸಿಕ್ಷಣ ಇಷ್ಟರ ಮಟ್ಟಿಗೆ ಬೆಳೆದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡದೇ ಹೋಗಿದ್ದರೆ ನಾವು ಎಷ್ಟರ ಮಟ್ಟಿಗೆ ಮುಂದಕ್ಕೆ ಒಯ್ಯುತ್ತಿದ್ದೆವು ಎಂದು ಆಲೋಚಿಸಬೇಕು ‌ಎಂದರು.

ನಮ್ಮ ರಾಜ್ಯದಲ್ಲಿ ನಡೆದಿರುವ ಅನೇಕ ಬದಲಾವಣೆಗಳನ್ನು ಗಮನಿಸಬೇಕು. ಕಳೆದ 8 – 10 ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಮಧು ಬಂಗಾರಪ್ಪ ಅವರು ಕ್ರೀಯಾಶೀಲ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಮೇಷ್ಟ್ರುಗಳ ಬಳಿ ಕೆಲಸ ಮಾಡುವುದು ಸುಲಭವಲ್ಲ. ಕ್ರೀಯಾಶೀಲತೆ ಇಲ್ಲದೆ ಇಷ್ಟೆಲ್ಲ ಸಾಧ್ಯವಾಗುವುದಿಲ್ಲ. ಬಸವರಾಜ ರಾಯರೆಡ್ಡಿ ಅವರು ಎರಡನೇ ಬಾರಿ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ‌ಮಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.

ಯಾವುದೇ ರಾಜ್ಯ ಪ್ರಗತಿ ಕಾಣಬೇಕಾದರೆ ಕ್ಯಾಪ್ಟನ್ ಸರಿ ಇರಬೇಕು. ನಮ್ಮ ಕ್ಯಾಪ್ಟನ್ ಡಿ.ಕೆ. ಶಿವಕುಮಾರ್ ಅವರು ಹೊಸ ಚಿಂತನೆಗಳನ್ನು ಇಟ್ಟುಕೊಂಡು ಬಂದಿದ್ದಾರೆ. ಅವರ ಆಶಯದಂತೆ ಕೆಲಸ‌ ಮಾಡಲಾಗುತ್ತಿದೆ. ಪುಸ್ತಕ, ಶೂ, ಮಧ್ಯಾಹ್ನ ಬಿಸಿಯೂಟ, ಹಾಸ್ಟೆಲ್‌ ಸೌಲಭ್ಯ ಹೀಗೆ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳಿವೆ. ಇದರ ಪ್ರತಿಫಲ ಸ್ವಲ್ಪ ಮಟ್ಟಿಗೆ ಕರ್ನಾಟಕದಲ್ಲಿ ಕಾಣಿಸುತ್ತಿದೆ. ಬೇರೆ ರಾಜ್ಯದ ಮಕ್ಕಳನ್ನು ಕರೆಸಿಕೊಂಡು ಓದಿಸುವಂತ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಇಂಜಿನಿಯರ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಕರ್ನಾಟಕದಲ್ಲಿ ಶೇ 40ರಷ್ಟು ಅಡ್ಮಿಷನ್ ಆಗುತ್ತಿವೆ ಎನ್ನುವ ಹೆಮ್ಮೆಯ ವಿಷಯ ಎಂದು ಸಭಿಕರಿಗೆ ತಿಳಿಸಿದರು.

ಪುಸ್ತಕ ಇಟ್ಟುಕೊಂಡು ಯಾರು ಬೇಕಾದರೂ ಪಾಠ ಮಾಡುತ್ತಾರೆ‌. ಮೌಲ್ಯಗಳನ್ನು ಬಿತ್ತಿ, ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದು  ಕೆಲಸ ಆಗಬೇಕು. ಕೃಷ್ಣಶಾಸ್ತ್ರಿ ಅವರು ಕಲಿಸಿದ ಪಾಠದಿಂದ ಇಲ್ಲಿ ನಿಂತು ಮಾತನಾಡಲು ನನಗೆ ಸಾಧ್ಯವಾಗಿದೆ. ಕಾಲ ನಿಜವಾಗಲೂ ಬದಲಾಗಿದೆ. ಯುವಕರು ತಮ್ಮ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ. ಜೆನ್ ಆಲ್ಫಾ, ಜೆನ್ ಬೀಟಾ ಬರುತ್ತಿದೆ. ಆದ್ದರಿಂದ ಮುಂದಿನ ಭವಿಷ್ಯದ ಭಾರತ ಏನಾಗುತ್ತಿದೆ ಎಂದು ಯೋಚಿಸಬೇಕಿದೆ. ಅವರ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು  ಕಿವಿಮಾತು ಹೇಳಿದರು.‌

ನಮ್ಮ ಪಕ್ಷದ ವರಿಷ್ಠರು ಚುನಾವಣಾ ಪ್ರಣಾಳಿಕೆ ಬರೆಯಲು ಅಧ್ಯಕ್ಷನನ್ನಾಗಿ ನೇಮಿಸಿದ್ದರು. ಒಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ. ಕಳೆದ ಮೂರು ವರ್ಷದಲ್ಲಿ ಕಾರಣಾಂತರಗಳಿಂದ ಒಪಿಎಸ್ ಜಾರಿಗೊಳಿಸು ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಒಪಿಎಸ್ ಜಾರಿ‌ ಮಾಡಿಯೇ ತೀರುತ್ತೇವೆ ಎಂದರು.

ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಹಿಂದೆ ಹೆಮ್ಮೆಯಿಂದ ಟಿ.ಆರ್ ಎಂಬ ಪೂರ್ವಪ್ರತ್ಯಯ ಶೀರ್ಷಿಕೆಯನ್ನು ಬಳಸಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರು ನಮ್ಮ ಮಕ್ಕಳ ಭವಿಷ್ಯ ರೂಪಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಗೌರವಿಸುವ ಸಲುವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇಲಾಖೆ ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿದೆ ಎಂದು ಸಹ ತಿಳಿಸಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಸಭಾಪತಿ ಸಲೀಂ ಅಹ್ಮದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗ್ರೇಟರ್  ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಡಾ.‌ ಕೆ. ಗೋವಿಂದರಾಜ್, ಪುಟ್ಟಣ್ಣ, ರಾಮೋಜಿಗೌಡ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮೀ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon