ಬೆಂಗಳೂರು: ಜ್ಞಾನವೇ ಶಕ್ತಿ, ಆ ಜ್ಞಾನ ಮತ್ತು ಸಂಸ್ಕೃತಿಯನ್ನು ಜಾಗೃತಗೊಳಿಸಿ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆ. ಅದರಿಂದಲೇ ಸಮಾಜದ ಪರಿವರ್ತನೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕವಿ ಹಾಗೂ ಸಾಹಿತಿ ಡಾ. ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.
ಬೆಂಗಳೂರು ವಕೀಲರ ಸಾಹಿತ್ಯ ಕೂಟದ ವತಿಯಿಂದ ಬುಧವಾರ ಸಾಹಿತ್ಯ ಲೋಕದ ಹಿರಿಯ ಕವಿ ಹಾಗೂ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಾಹಿತ್ಯ ಸಿಂಧು ಎನ್ನುವ ಬಿರುದನ್ನು ಅವರಿಗೆ ನೀಡಿ ಗೌರವಿಸಲಾಯಿತು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಎನ್ನುವುದು ಕೇವಲ ಶಬ್ದಗಳ ಜೋಡಣೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ ಮತ್ತು ವೈಚಾರಿಕ ಜಾಗೃತಿಯನ್ನು ನೀಡುವ ದಿವ್ಯ ಶಕ್ತಿ. ಇಂದಿನ ಆಧುನಿಕ ಯುಗದಲ್ಲಿ, ಸಮಾಜದ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.
ಜ್ಞಾನದ ಶಕ್ತಿಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಒಬ್ಬ ವ್ಯಕ್ತಿಯ ಬೆಳವಣಿಗೆಗೆ, ಬುದ್ಧಿವಂತಿಕೆಗೆ ಹಾಗೂ ಆತನ ವ್ಯಕ್ತಿತ್ವದ ವಿಕಸನಕ್ಕೆ ಜ್ಞಾನ ಮತ್ತು ಉತ್ತಮ ಅಭಿರುಚಿಗಳೇ ಪ್ರಮುಖ ಕಾರಣವಾಗುತ್ತವೆ.ಇಂದಿನ ತಂತ್ರಜ್ಞಾನದ ಓಟದಲ್ಲಿ ಮೊಬೈಲ್ ಮತ್ತು ಡಿಜಿಟಲ್ ಜಗತ್ತು ಎಲ್ಲರನ್ನು ಆವರಿಸಿಕೊಂಡಿದ್ದು, ನೈಜ ಸಾಹಿತ್ಯದ ವಾಚನ ಹಾಗೂ ಮೌಲ್ಯಧಾರಿತ ಸಂಸ್ಕೃತಿಯಿಂದ ಜನರು ದೂರವಾಗುತ್ತಿದ್ದಾರೆ. ಅಭಿರುಚಿ ಬದಲಾಗಿ ಅರುಚಿ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ, ಸಮಾಜಕ್ಕೆ ಉತ್ತಮ ದಾರಿ ತೋರಿಸುವ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಇಂಧನವನ್ನು ನೀಡುವ ಜವಾಬ್ದಾರಿ ಸಾಹಿತಿಗಳ ಮೇಲಿದೆ ಎಂದು ಅಭಿಪ್ರಾಯಿಸಿದರು.
ಸಾಹಿತ್ಯಕ್ಕೆ ಸಮಾಜದಲ್ಲಿ ಕ್ರಾಂತಿಯನ್ನು, ಪರಿವರ್ತನೆಯನ್ನು ತರುವ ಅದ್ಭುತ ಸಾಮರ್ಥ್ಯವಿದೆ ಹಿಂದಿನ ಮಹಾನ್ ಸಾಹಿತಿಗಳು ಮತ್ತು ಚಿಂತಕರು ನೀಡಿದ ಆದರ್ಶಗಳು, ಮೌಲ್ಯಗಳು ಹಾಗೂ ವಿಚಾರಧಾರೆಗಳು ಸಮಾಜಕ್ಕೆ ಎಂದಿಗೂ ದಾರಿದೀಪವಾಗಿ ಉಳಿದಿವೆ. ಉತ್ತಮ ಸಾಹಿತ್ಯದ ನಿರಂತರ ಅಧ್ಯಯನ ಮನುಷ್ಯನ ಆಲೋಚನಾ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ. ಸಾಹಿತ್ಯ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯ ಕೂಡ ಆಗಿದ್ದು, ಆದ್ದರಿಂದ ಸಾಹಿತ್ಯದ ವೈಚಾರಿಕ ಕ್ರಾಂತಿಯ ಮೂಲಕ ಸಮಾಜದ ಭದ್ರ ಬುನಾದಿಯನ್ನು ಪುನರ್ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ ಬೈರಮಂಗಲ ರಾಮೇಗೌಡ ಮಾತನಾಡಿ, ವಕೀಲ ವೃತ್ತಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನಿಕಟ ಸಂಬಂಧವಿದ್ದು, ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಸಾಹಿತ್ಯದ ಮುಖೇನ ಗಳಿಸಿಕೊಳ್ಳಬೇಕಾದ ಸಂಪತ್ತು ಅಪಾರವಾಗಿದೆ. ಸಾಹಿತ್ಯ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರ ಪ್ರೀತಿಯ ಒತ್ತಾಯಕ್ಕೆ ಮಣಿದು ಬಂದಿದ್ದೇನೆ. ಇಲ್ಲಿ ನೆರೆದಿರುವ ಅಭಿಮಾನಿಗಳ ಪ್ರೀತಿ ಮತ್ತು ಡಾ. ದೊಡ್ಡರಂಗೇಗೌಡ ಅವರಿಗೆ ಹಮ್ಮಿಕೊಂಡ ಸನ್ಮಾನ ನನ್ನ ಮನಸ್ಸಿಗೆ ತೀವ್ರ ಸಂತೋಷ ನೀಡಿದೆ. ಇಂತಹ ಮಹನೀಯರ ಆಲೋಚನೆಗಳನ್ನು ವಕೀಲ ಬಾಂಧವರೊಂದಿಗೆ ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ್ ಬಿ ಗೌಡ ಮಾತನಾಡಿ, ಸುಮಾರು 10 ಸಾವಿರ ಸದಸ್ಯರನ್ನು ಹೊಂದಿರುವ ಬೆಂಗಳೂರು ವಕೀಲರ ಸಾಹಿತ್ಯ ಕೂಟ ವರ್ಷದಲ್ಲಿ ಹಲವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಯುವ ವಕೀಲರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ 50 ರಿಂದ 60 ವರ್ಷಗಳ ಅನುಭವವಿರುವ ಹಿರಿಯ ವಕೀಲರಿಂದ ಕಾರ್ಯಾಗಾರಗಳು ಹಾಗೂ ಹಲವು ವಿನೂತನ ಕಾರ್ಯಕ್ರಮಗಳನ್ನು ಕೂಟದ ವತಿಯಿಂದ ಆಯೋಜಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ. ಜಿ ಶಿವಶಂಕರೇಗೌಡ, ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಪ್ರಧಾನ ಕಾರ್ಯದರ್ಶಿ ಆನಂದ್ ವಿ, ಖಜಾಂಚಿ ಹರೀಶ ಜೆ, ನಗರ ವಿಭಾಗದ ಉಪಾಧ್ಯಕ್ಷ ಶಶಿಕುಮಾರ್ ಆರ್ ಗೌಡ, ಜಂಟಿ ಕಾರ್ಯದರ್ಶಿ ಮುನಿರಾಜು ಕೆ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.














