ಬೆಂಗಳೂರು: ಕಳೆದ 8 ವರ್ಷಗಳಲ್ಲಿ ಥೆಲಸೇಮಿಯಾ ಪೀಡಿತ ಸಾವಿರಾರು ಮಕ್ಕಳಿಗೆ ಡಿಕೆಎಂಎಸ್ ಸಂಸ್ಥೆಯು ಸಂಕಲ್ಪ ಭಾರತ ಫೌಂಡೇಶನ್ ಸಹಯೋಗದಲ್ಲಿ ಕಾಂಡಕೋಶ ಕಸಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದ್ದು, ಇದು ಹೊಸ ಮೈಲುಗಲ್ಲಾಗಿದೆ.
ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಡಿಕೆಎಂಎಸ್‌ನ ಜಾಗತಿಕ ಸಿಇಒ ಡಾ. ಎಲ್ಕೆ ನ್ಯೂಜಹ್ರ್, ಸಂಸ್ಥೆ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಎಚ್‌ಎಲ್‌ಎ ಟೈಪಿಂಗ್ (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್ಸ್), ಥೆಲಸೇಮಿಯಾ ನಿರ್ವಹಣೆ ಮತ್ತು ಕಸಿ ವೆಚ್ಚಗಳನ್ನು ಭರಿಸಿದೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಮಕ್ಕಳ ಚಿಕಿತ್ಸೆ ಮತ್ತು ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್‌ನಲ್ಲಿ ಹೂಡಿಕೆ ಮಾಡಿದೆ. ಜತೆಗೆ ಶುಶ್ರೂಷಕರಿಗೆ ತಜ್ಞ ತರಬೇತಿ ನೀಡುತ್ತಿದ್ದು, 2025 ರಿಂದ ವೈದ್ಯಕೀಯ ಸಂಶೋಧನೆಯಲ್ಲಿ ಕೂಡ ಸಂಸ್ಥೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಕಲ್ಪ ಭಾರತ ಫೌಂಡೇಶನ್ ಅಧ್ಯಕ್ಷ ರಜತ್ ಕುಮಾರ್‌ಅಗರ್ವಾಲ್ ಮಾತನಾಡಿ, ನಮ್ಮ ಗುರಿ ಕೇವಲ ಕಸಿ ಚಿಕತ್ಸೆಗೆ ಮಾತ್ರ ಸೀಮಿತವಲ್ಲ. ರೋಗ ತಡೆಗಟ್ಟುವಿಕೆ, ಸಮಗ್ರ ಥೆಲಸೇಮಿಯಾ ಆರೈಕೆ, ದಾನಿಗಳ ಗುರುತಿಸುವಿಕೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಕಾರ್ಯವನ್ನೂ ಮಾಡಲಾಗಿದೆ. ಇದರಿಂದಾಗಿಯೇ ಒಂದು ಸಾವಿರ ಕಸಿ ಚಿಕಿತ್ಸೆ ಗುರಿ ತಲುಪಿದ್ದೇವೆ. 2047ರ ವೇಳೆಗೆ ಥೆಲಸೇಮಿಯಾ ಮತ್ತು ಹಿಮೋಗ್ಲೋಬಿನ್ ಸಮಸ್ಯೆ ಮುಕ್ತ ಭಾರತ ನಿರ್ಮಿಸುವುದು ನಮ್ಮ ಕನಸು ಎಂದು ತಿಳಿಸಿದರು.
ಡಿಕೆಎಂಎಸ್ ಫೌಂಡೇಶನ್ ಇಂಡಿಯಾ ಕಾರ್ಯನಿರ್ವಾಹಕ ಚೇರ್‌ಮನ್ ಪ್ಯಾಟ್ರಿಕ್ ಪೌಲ್ ಮಾತನಾಡಿ, ಥೆಲಸೇಮಿಯಾ ಕಾರ್ಯಕ್ರಮದ ಮೂಲಕ ಉಚಿತ ಹೆಚ್‌ಎಲ್‌ಎ ಟೈಪಿಂಗ್ ಮತ್ತು ದಾನಿಗಳ ಹುಡುಕಾಟ ಒದಗಿಸುತ್ತೇವೆ, ಹಾಗೂ ನಮ್ಮ ಸಹಾಯ ಕಾರ್ಯಕ್ರಮ ಅರ್ಹ ಕುಟುಂಬಗಳಿಗೆ ಕಸಿ ಮತ್ತು ಕಸಿ ನಂತರದ ಖರ್ಚುವೆಚ್ಚಕ್ಕೂ ನೆರವಾಗುತ್ತಿದೆ ಎಂದರು.
ಕ್ಯೂರ್ 2 ಚಿಲ್ಡ್ರನ್ ಸಂಸ್ಥೆಯ ಡಾ. ಲಾರೆನ್ಸ್ ಫಾಕ್ನರ್ ಉಪಸ್ಥಿತರಿದ್ದರು.














