ಬೆಂಗಳೂರು: ಆದಿಚುಂಚನಗಿರಿ ಮಠದ ಪರಮಪೂಜ್ಯ ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ 14ನೇ ವರ್ಷದ ಪುಣ್ಯಸಂಸ್ಮರಣೆ ಅಂಗವಾಗಿ ನೂತನ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭವನ್ನು ಸೆ.20ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ನ ಪತ್ರಿಕಾ ಮುಖ್ಯ ಸಂಯೋಜಕ ಮತ್ತು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಎನ್ ನಟರಾಜ್ ಗೌಡ ತಿಳಿಸಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ನ ವಾರ್ಷಿಕೋತ್ಸವ ಮತ್ತು ಮಾನ್ಯ ಮುಖ್ಯಮಂತ್ರಿಗಳ ಅಭಿನಂದನಾ ಸಮಿತಿಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಸಮಾರಂಭ ನಡೆಯಲಿದೆ. ಐತಿಹಾಸಿಕ ಗಂಗ ರಾಜವಂಶದ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ, ಆರೋಗ್ಯ, ಅನ್ನದಾಸೋಹ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಾಲಗಂಗಾಧರನಾಥ ಮಹಾಸ್ವಾಮಿಗಳ ಆದರ್ಶಗಳನ್ನು ಸ್ಮರಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಜತೆಗೆ ನಾಡಿನ ಅಭಿವೃದ್ಧಿಯ ಹೊಣೆ ಹೊತ್ತಿರುವ ನೂತನ ಸರ್ಕಾರವನ್ನು ಅಭಿನಂದಿಸಿ, ಮುಖ್ಯಮಂತ್ರಿ ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮ ಸಹ ನಡೆಯಲಿದೆ ಎಂದರು.
ಸಮುದಾಯದ ಸಂಘಟನೆ ಹಾಗೂ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ಈ ಕಾರ್ಯಕ್ರಮ ದಿಕ್ಸೂಚಿಯಾಗಲಿದೆ. ಆದ್ದರಿಂದ ಹಿರಿಯ-ಕಿರಿಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಯುವಜನರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಟರಾಜ್ ಗೌಡ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಹಾಗೂ ಅಭಿನಂದನಾ ಸಮಿತಿಯ ಅಧ್ಯಕ್ಷ ಕೆ.ಟಿ. ಚಂದ್ರು, ಸಮಿತಿಯ ಕಾರ್ಯದರ್ಶಿ ವಿಶ್ವನಾಥ್ ಎನ್, ಮುಖ್ಯ ಸಂಯೋಜಕ ರಘು ದೊಡ್ಡರಿ, ನಿರ್ದೇಶಕರುಗಳಾದ ಜಯಶ್ರೀ ಗೌಡ ಹಾಗೂ ವಿನಯ್ ಕುಮಾರ್ ಪೂಜಾರಿ, ಸಂಯೋಜಕರಾದ ವಿಜಯ್ ಕುಮಾರ್ ಉಪಸ್ಥಿತರಿದ್ದರು.














