ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮತ್ತು ಹಜ್ ಕಮಿಟಿಯಲ್ಲಿ ನಡೆಯುತ್ತಿದೆ. ಈ ಹಿಂದೆ ಕೂಡ ವ್ಯಾಪಕ ಪ್ರಮಾಣದ ಅಕ್ರಮ ಹಾಗೂ ಲೂಟಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧದ ನಿಯಂತ್ರಣಾ ಕ್ರಮಗಳನ್ನು ಅಲ್ಪಸಂಖ್ಯಾತ ಖಾತೆ ಸಚಿವ ಯು.ಟಿ. ಖಾದರ್ ಶೀಘ್ರ ಕೈಗೊಳ್ಳಬೇಕು ಎಂದು ರಾಜ್ಯ ಐಕ್ಯತಾ ಒಕ್ಕೂಟದ ರಾಜ್ಯಾಧ್ಯಕ್ಷ ಮುಜಾಹಿದ್ ಅಲಿ ಬಾಬಾ ಒತ್ತಾಯಿಸಿದರು.
ಅಕ್ರಮಗಳ ಸಂಬಂಧ ಮುಸ್ಲಿಮ ಸಮುದಾಯದ ಧರ್ಮ ಗುರುಗಳ ಹಾಗೂ ಮುಖಂಡರ ಸಭೆ ಇನ್ಫೆಂಟ್ರಿ ರಸ್ತೆಯ ಶಾದಿ ಮಹಲ್ ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಕ್ಫ್ ಮಂಡಳಿಯ ಮಾಜಿ ಪದಾಧಿಕಾರಿಗಳು ಹಾಗೂ ಕೆಲವು ಸದಸ್ಯರು ಸೇರಿಕೊಂಡು ಅಕ್ರಮಗಳನ್ನು ಮುಚ್ಚಿಹಾಕಲು ಗುಂಡಾಗಿರಿ ನಡೆಸುತ್ತಿದ್ದಾರೆ. ದರ್ಗಾ, ಖಾನ್ಕಾ ಹಾಗೂ ಅಶೂರ್ ಖಾನಾಗಳಿಗೆ ಸೇರಿದ ದೇವದತ್ತವಾದ ಆಸ್ತಿಗಳನ್ನು ರಕ್ಷಿಸುವ ಬದಲು, ಸಾರ್ವಜನಿಕ ಮತ್ತು ಧಾರ್ಮಿಕ ಆಸ್ತಿಯನ್ನು ವರ್ಷಗಳಿಂದ ಲೂಟಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವರು, ಹಿಂದಿನ ಅಧ್ಯಕ್ಷರಾದ ಅನ್ವರ್ ಪಾಷಾ, ಉಪಾಧ್ಯಕ್ಷ ಶಫಿ ಸಾಧಿ ಸೇರಿದಂತೆ ಹಲವು ಮಾಜಿ ಆಡಳಿತಗಾರರ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು, ಈ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆಯಾಗಬೇಕು. ರಾಜ್ಯದ ನೂತನ ಸಚಿವ ಯು.ಟಿ. ಖಾದರ್ ಅವರು ಅಲ್ಪಸಂಖ್ಯಾತ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಅವರು ತಕ್ಷಣ ಮಧ್ಯಪ್ರವೇಶಿಸಿ ವಕ್ಫ್ ಮಂಡಳಿ ಹಾಗೂ ಹಜ್ ಕಮಿಟಿಯನ್ನು ಪುನರ್ ರಚನೆ ಮಾಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕ ಹಾಗೂ ದಕ್ಷ ವ್ಯಕ್ತಿಗಳನ್ನು ಸಮಿತಿಗೆ ನೇಮಕ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೈಕಮಾಂಡ್ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎ ಜಾಕೀರ್ ಹುಸೇನ್ ಮಾತನಾಡಿ, ರಾಜ್ಯ ವಕ್ಫ್ ಮಂಡಳಿಯ ಕಮಿಟಿಯಲ್ಲಿರುವ ಕೆಲ ಸದಸ್ಯರು ಸಚಿವರಿಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಂಡಳಿಯಲ್ಲಿರುವ ಅಂತಹ ಸದಸ್ಯರನ್ನು ತಕ್ಷಣವೇ ತೆಗೆದು ಹಾಕಬೇಕು. ಇವರುಗಳಿಂದ ವಕ್ಫ್ ಆಸ್ತಿ ಮತ್ತು ಸಮಾಜದ ಹಿತ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.














