ಬೆಂಗಳೂರು: ಅಹಿಂದ ಸಂಘಟನೆ ಯಾವುದೇ ನಿರ್ದಿಷ್ಟ ಜಾತಿಯಗಳ ವಿರುದ್ಧವಲ್ಲ. ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆನ್ನುವುದು ಇದರ ಧ್ಯೇಯವಾಗಿದೆ. ಸಾಮಾಜಿಕ ನ್ಯಾಯದ ಹೋರಾಟವನ್ನು ತಾಲೂಕು ಹಾಗೂ ಕ್ಷೇತ್ರ ಮಟ್ಟದಲ್ಲಿ ಬಲಪಡಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದ ಗಾಂಧಿಭವನದಲ್ಲಿ ಶನಿವಾರ ರಾಷ್ಟ್ರೀಯ ಅಹಿಂದ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾನ್ಶಿರಾಮ್ ಅವರು ಹೇಳಿದಂತೆ ಜಿಸ್ಕಿ ಜಿತ್ನಿ ಭಾಗೀದಾರಿ, ಉಸ್ಕಿ ಉತ್ನಿ ಹಿಸ್ಸೇದಾರಿ ಎಂಬ ತತ್ವದಡಿ ಎಲ್ಲ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ನಮ್ಮಲ್ಲಿ ರಾಜಕೀಯ ಮತ್ತು ಸಾಮಾಜಿಕ ಜಾಗೃತಿ ಕೊರತೆಯಿಂದಾಗಿ ಅನೇಕ ಸಮುದಾಯಗಳು ಇಂದಿಗೂ ಸೌಲಭ್ಯಗಳಿಂದ ವಂಚಿತವಾಗಿವೆ. ಸಿದ್ಧಾಂತಕ್ಕಾಗಿ ಒಗ್ಗಟ್ಟಿನಿಂದ ನಿಲ್ಲುವ ವಾತಾವರಣವನ್ನು ನಾವು ಸೃಷ್ಟಿಸಬೇಕಿದೆ ಎಂದು ಹೇಳಿದರು.
ದೇವೇಗೌಡರನ್ನು ಪ್ರಧಾನಿ ಮಾಡಿದ ದಿನಗಳಿಂದ ಹಿಡಿದು ಸಿದ್ದರಾಮಯ್ಯನವರ ರಾಜಕೀಯ ಪ್ರಗತಿಯವರೆಗೂ ಅಹಿಂದ ವರ್ಗದ ಶಕ್ತಿ ಸಾಬೀತಾಗಿದೆ. ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ತ್ರಿವೇಣಿ ಸಂಗಮವೇ ಅಹಿಂದ. ಈ ಹೋರಾಟವನ್ನು ಇಲ್ಲಿಗೇ ನಿಲ್ಲಿಸದೆ ಮುಂಬರುವ ದಿನಗಳಲ್ಲಿ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಹಳೆಯ ಮೈಸೂರು ಭಾಗದ ತಾಲೂಕು ಮತ್ತು ಕ್ಷೇತ್ರ ಮಟ್ಟಕ್ಕೆ ಕೊಂಡೊಯ್ಯಬೇಕು. ಸರ್ಕಾರ ಕೂಡ ಬಜೆಟ್ ಪ್ರಸ್ತಾವನೆಗಳಲ್ಲಿ ಅಹಿಂದ ವರ್ಗಕ್ಕೆ ಶಿಕ್ಷಣ, ಉಚಿತ ವಸತಿ ನಿಲಯಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಸುಸಜ್ಜಿತ ಶಾಲಾ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದರು.
ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಅಹಿಂದ ನಾಯಕನ ಬೆಳೆಸಿ ಅವರಿಗೆ ಹಿಂದುಳಿದ ವರ್ಗಗಳ ರಥ ಎಳೆಯಲು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸಂಘಟನೆ ಕೇವಲ ಕುರುಬರಿಗೆ ಸೀಮಿತವಾಗಿರದೆ ಉಪ್ಪಾರ, ನೇಕಾರ, ಈಡಿಗ ಸೇರಿದಂತೆ ಸಣ್ಣ ಸಮುದಾಯಗಳನ್ನು ಒಳಗೊಳ್ಳಬೇಕು. ಈ ಸಮುದಾಯದವರನ್ನು ನಾಯಕರನ್ನಾಗಿ ಬೆಳೆಸುವಲ್ಲಿ ಅವರು ಆಸಕ್ತಿಯನ್ನು ತೋರಬೇಕು ಎಂದು ಸಿ.ಎಂ ಇಬ್ರಾಹಿಂ ಮನವಿ ಮಾಡಿದರು.
ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್ ಶಿವಳ್ಳಿ ಮಾತನಾಡಿ, ಸಂವಿಧಾನದ ಆಶಯಗಳು, ಬುದ್ಧ-ಬಸವ-ಅಂಬೇಡ್ಕರ್ ಅವರ ಸಿದ್ಧಾಂತಗಳ ಆಧಾರದ ಮೇಲೆ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಜಾತೀವಾರು ಸಮೀಕ್ಷೆ ವರದಿಯನ್ನು ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವುದು ಮೊದಲ ಒತ್ತಾಯವಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುವವರೆಗೆ ಮತ್ತು ಜಾತೀವ್ಯವಸ್ಥೆ ಇರುವವರೆಗೆ ಮೀಸಲಾತಿ ಮುಂದುವರಿಯಬೇಕು ಎನ್ನುವುದು ನಮ್ಮ ನಿಲುವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಅಹಿಂದ ಪರ ಜಾಗೃತಿ ಜನಾಂದೋಲನಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮುಂದಿನ ದಿನಗಳಲ್ಲಿ 2028ರ ಚುನಾವಣಾ ವೇಳೆಗೆ ಅಹಿಂದ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ತನ್ನ ಕಾರ್ಯವನ್ನು ನಿರ್ವಹಿಸಲಿದೆ. ಇದರ ನೇತೃತ್ವವನ್ನು ಸಿ.ಎಂ.ಇಬ್ರಾಹಿಂ ವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ, ವಕೀಲ ದೇವರಾಜು ಅರಸು ಮರಿ ಮೊಮ್ಮಗ ಸಮೃದ್ಧ್ ಸೂರಜ್ ಹೆಗಡೆ ಮಾತನಾಡಿ, ಅಹಿಂದ ಸಂಘಟನೆಯು ಸಾಗಬೇಕಾದ ಹಾದಿ ಬಹಳಷ್ಟಿದೆ ಮತ್ತು ಇದರಲ್ಲಿ ಯುವಜನತೆಯ ಪಾತ್ರ ಬಹಳಷ್ಟಿದೆ. ಹೊಸ ನಾಯಕತ್ವದ ಮಾರ್ಗದರ್ಶನದಲ್ಲಿ ಈ ಹೋರಾಟವು ರಾಜ್ಯಾದ್ಯಂತ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಅಹಿಂದ ಮುಖಂಡ ಲೋಹಿತ್ ನಾಯಕ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಕಾರಣದ ಸಂಧ್ಯಾ ಕಾಲದಲ್ಲಿದ್ದಾರೆ. ಮತ್ತೊಬ್ಬ ಪರ್ಯಾಯ ಹಿಂದುಳಿದ ವರ್ಗಗಳ ನಾಯಕನ ಬೆಳವಣಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಜಾಗೃತಿ ಸಮಾವೇಶದಲ್ಲಿ ಅಹಿಂದ ಮುಖಂಡ ಮದನ್, ಮಹಿಳಾ ಘಟಕ ಅಧ್ಯಕ್ಷೆ ಸುಶೀಲಾ ಕೆ.ಎಂ, ಕವಿತಾ ಬಿ.ನಾಯಕ್, ಹನುಮಂತಪ್ಪ ಅರಸನಕೇರಿ ಸೇರಿದಂತೆ ಅಹಿಂದ ಸಂಘಟನೆಯ ಹಲವಾರು ಪ್ರಮುಖ ಮುಖಂಡರು, ವಿವಿಧ ಸಮುದಾಯಗಳ ಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.














