ಬೆಂಗಳೂರು: ವರನಟ ದಿವಂಗತ ಡಾ ರಾಜಕುಮಾರ್ ಅವರು ರಂಗಭೂಮಿ ಹಾಗೂ ಸಿನಿಮಾ ನಾಯಕ ನಟನಾಗಿ ನೋಡುವುದಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸುತ್ತಾರೆ. ಈ ಕಾರಣಕ್ಕಾಗಿಯೇ ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಸ್ತಿಗಿಂತ ಮಿಗಿಲಾಗಿ ಕರ್ನಾಟಕದ ಜನತೆ ಪ್ರೀತಿಯಿಂದ ಅಣ್ಣಾವ್ರು ಎಂದು ಸಂಬೋಧಿಸುತ್ತಾರೆ. ಇದು ಎಲ್ಲಾ ಬಿರುದುಗಳಿಗಿಂತ ಮಿಗಿಲಾದದ್ದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್. ಪಿ ಸಂದೇಶ್ ಅಭಿಪ್ರಾಯಪಟ್ಟರು.
ಶುಕ್ರವಾರ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ವತಿಯಿಂದ ಮೇಯೋ ಹಾಲ್ ಕೋರ್ಟ್ ಸಭಾಂಗಣದಲ್ಲಿ ಡಾ ರಾಜಕುಮಾರ್ ಸ್ಮರಣೆ ಹಾಗೂ ವಕೀಲ ಕಲಾವಿದರಿಂದ ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ ರಾಜಕುಮಾರ್ ಅವರು ನಟನೆ ಮತ್ತು ಗಾಯನದ ಹೊರತಾಗಿ ನಾಡು ನುಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಸಂಭ್ರಮಿಸಲಾಗುತ್ತಿದ್ದರೆ ಅದಕ್ಕೆ ಕಾರಣ ಅವರೇ ಎಂದರೇ ತಪ್ಪಲಾರದು ಎಂದರು.
ಅವರ ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಇಂದಿನ ಕಾರ್ಯಕ್ರಮದಲ್ಲಿ ನಡೆಸಲಾಗುತ್ತಿದೆ. ಕೇವಲ ಕಲಾವಿದರಾಗಿ ಮಾತ್ರವಲ್ಲದೆ ಅವರ ವ್ಯಕ್ತಿವನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ನಾಡಿನ ಬದುಕಿನ ಭಾಗವಾಗಿ ಅವರನ್ನು ಸ್ಮರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿರುವ ಕಾರ್ಯಕ್ರಮ ಆಯೋಜಿಸಿರುವ ಬೆಂಗಳೂರು ವಕೀಲರ ಸಾಹಿತ್ಯ ಕೂಟಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ನುಡಿದರು.
ಚಲನಚಿತ್ರ ನಟ ಹಾಗೂ ಡಾ ರಾಜಕುಮಾರ್ ಮೊಮ್ಮಗ ಶಣ್ಮುಖ ಗೋವಿಂದರಾಜ್ ಮಾತನಾಡಿ, ಇದು ಸುಂದರ ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಆಯೋಜನೆಯಲ್ಲಿ ವಕೀಲರ ಸಾಹಿತ್ಯ ಕೂಟದ ಶ್ರಮ ಸಾಕಷ್ಟಿದೆ. ಇಲ್ಲಿರುವ ಎಲ್ಲರ ಸಾಹಿತ್ಯ, ಸಂಗೀತ ಮತ್ತು ಕಲಾಸಕ್ತಿ ನನ್ನನ್ನು ನಿಬ್ಬೆರಗಾಗಿಸಿದೆ. ಇಷ್ಟು ವರ್ಷಗಳ ನಂತರ ಕೂಡ ನಮ್ಮ ಕುಟುಂಬದ ಕುರಿತು ಎಲ್ಲರ ಪ್ರೀತಿ ನೋಡಿ ಮಂತ್ರಮುಗ್ದನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ್ ಬಿ ಗೌಡ ಮಾತನಾಡಿ, ರಾಜ್ ಕುಮಾರ್ ಅವರು ಎಷ್ಟು ಎತ್ತರಕ್ಕೆ ಬೆಳೆದರೂ ಸರಳತೆಯ ಪ್ರತೀಕವಾಗಿದ್ದರು ಎಂದರು. ಕೂಟದ ಖಜಾಂಚಿ ಹರೀಶ ಜೆ ಎಲ್ಲರಿಗೂ ವಂದಿಸಿ, ರಾಜ್ ಕುಮಾರ್ ಅಭಿಯಾನಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ ಪ್ರವೀಣ್ ಗೌಡ, ಸಾಹಿತ್ಯ ಕೂಟದ ಪ್ರಧಾನ ಕಾರ್ಯದರ್ಶಿ ಆನಂದ್ ವಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.














