ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇಕಾರರನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಘೋಷಿಸಿದ್ದು, ಈ ಬಾರಿ ಆಗಸ್ಟ್ 7 ರಂದು ಪ್ರತಿ ತಾಲೂಕು, ಜಿಲ್ಲೆಗಳಲ್ಲಿ ವಿಶೇಷ ಆಚರಣೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್ ಸೋಮಶೇಖರ್ ಹೇಳಿದರು.
ಭಾನುವಾರ ಕಾರ್ಪೊರೇಷನ್ ಸರ್ಕಲ್ ಬಳಿ ಇರುವ ತೊಗಟವೀರ ಕ್ಷತ್ರಿಯ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯ ಒಕ್ಕೂಟದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ವಿಶೇಷ ಸಭೆ ನಡೆಯಿತು. ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೇಕಾರ ವೃತ್ತಿ ನಶಿಸಿ ಹೋಗಬಾರದು ಎನ್ನುವುದು ಕೇಂದ್ರ ಸರ್ಕಾರದ ಆಶಯವಾಗಿದೆ. ಈ ಹಿನ್ನಲೆಯಲ್ಲಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಒಕ್ಕೂಟದ ವತಿಯಿಂದ ಕೂಡ ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳಲ್ಲಿ ನೇಕಾರ ಸಮುದಾಯ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. 31 ಜಿಲ್ಲೆಗಳಲ್ಲೂ ನಮ್ಮ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಅವರುಗಳ ಹಕ್ಕುಗಳನ್ನು ಸಂರಕ್ಷಿಸಲು ಸದಸ್ಯತ್ವ ಅಭಿಯಾನವನ್ನು ನಡೆಸಲು ನಿರ್ಧರಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಪದಾಧಿಕಾರಿಗಳ ಪುನರ್ರಚನೆ ಕೂಡ ನಡೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಈಗಾಗಲೇ ಅಸ್ತಿತ್ವದಲ್ಲಿರುವ ನೇಕಾರ ಅಭಿವೃದ್ಧಿ ನಿಗಮಕ್ಕೆ ಸಾಕಷ್ಟು ಅನುದಾನವನ್ನು ನೀಡಿ ಪುನಶ್ಚೇತನಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಒಕ್ಕೂರಲಿನ ಸಹಮತ ದೊರೆತಿದೆ ಎಂದರು.
ಒಕ್ಕೂಟದ ವತಿಯಿಂದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಸಂಬಂಧಿಸಿದ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸುವ ಪ್ರಯತ್ನ ಜಾರಿಯಲ್ಲಿದೆ. ಯಾವುದೇ ಒಡಕಿಲ್ಲದೆ ಮುಂದುವರೆದರೆ ಮಾತ್ರ ನೇಕಾರ ಸಮುದಾಯದ ಏಳ್ಗೆ ಸಾಧ್ಯವಾಗಲಿದೆ ಎಂದು ಬಿ.ಎಸ್ ಸೋಮಶೇಖರ್ ಪ್ರತಿಪಾದಿಸಿದರು.













