ಬೆಂಗಳೂರು: ಘನ ಮೌನಿ, ತ್ರಿಕಾಲ ಜ್ಞಾನಿ,ಮೌನ ತಪಸ್ವಿ ಚಿಕೇನಕೊಪ್ಪದ ಶ್ರೀ ಚೆನ್ನವೀರ ಶರಣರ 31ನೇ ಪುಣ್ಯ ಸ್ಮರಣೋತ್ಸವ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಬಸವರಾಜ ಪಾಟೀಲ್ ಅನ್ವರಿ, ಕಡಲುಬಾಳು ಗವಿಮಠದ ಮರಿಶಾಂತವೀರ ಮಹಾಸ್ವಾಮಿ, ಶಿವಶಾಂತವೀರ ಕಾರ್ಯಕ್ರಮ ಉದ್ಘಾಟಿಸಿ, ಚನ್ನವೀರ ಶರಣರ ಭಾವಚಿತ್ರಕ್ಕೆ ಗೌರವ ಸಮರ್ಪಣೆ ಸಲ್ಲಿಸಿದರು.
ಧಾರಾವಾಡ ಐಐಟಿ ಸಂದರ್ಶಕ ಪ್ರಾಧ್ಯಾಪಕ ಡಾ.ಎಸ್.ಎಮ್.ಶಿವಪ್ರಸಾದ್ ವಿಶೇಷ ಉಪನ್ಯಾಸ ನೀಡಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕಾಯಕಲ್ಪದಂತೆ ಸಾರ್ಥಕದ ಬದುಕು ಸಾಗಿಸಿ ಸಿದ್ಧಿಸಿ ಗವಿಸಿದ್ಧನ ಶಿಷ್ಯ ಪರಂಪರೆಗೆ ಸಾಕ್ಷಿಯಾದವರು ಚಿಕೇನ ಕೊಪ್ಪದ ಚನ್ನವೀರ ಶರಣರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಶರಣ ಪರಂಪರೆಯ ವಾರಸುದಾರಾಗಿ ಅಂದ ಅನಾಥರಿಗೆ ಆಶ್ರಯದ ಅಲ್ಲಮರಾಗಿ ಅರಿವು ಆಚಾರದ ಸರಿ ಪಾಲಕರಾಗಿ ನಾಡಿನೆಲ್ಲಡೆ ಸಂಚರಿಸಿ ಸದ್ಭಾವ ಸಾರಿದ ಭಕ್ತರ ದೇವರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಚಿಕೇನಕೊಪ್ಪ ಮಠದಲ್ಲಿ ಅಧ್ಯಯನ ಪೂರ್ಣಗೊಳಿಸಿದ ಪ್ರತಿಭಾನ್ವಿತ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಅನ್ನದಾನಿ ಹಿರೇಮಠ, ಎಸ್ ಬಸವರಾಜ, ಶಿವಕುಮಾರ ಸೊಪ್ಪಣ್ಣನವರ, ಎ.ಬಿ ಜಕ್ಕಲಿ ಮತ್ತಿತರರು ಭಾಗವಹಿಸಿದ್ದರು. ದೂರದರ್ಶನ ಕಲಾವಿದೆ ಗೀತಾ ಭತ್ತದ ಅವರ ಭಕ್ತಿ ಸಂಗೀತ ಎಲ್ಲರ ಮನಸೂರೆಗೊಂಡಿತು.













