ಖಾನಾಪುರ: ತಾಲೂಕಿನ ಬೈಲೂರ ಗ್ರಾಮ ಪಂಚಾಯಿತಿಯ ಭ್ರಷ್ಟ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಕೊನೆಗೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಈ ನುಂಗಣ್ಣನನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮನೆಗೆ ಕಳುಹಿಸಿದೆ. ಸರ್ಕಾರದ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ ಆರೋಪ ಹೊತ್ತ ಡಾಟಾ ಎಂಟ್ರಿ ಆಪರೇಟರ್ ನೀಲೇಶ್ ಮಾದಾರ ಕೊನೆಗೂ ಸಸ್ಪೆಂಡ್ ಆಗಿದ್ದಾರೆ.
ನುಂಗಣ್ಣ ನೀಲೇಶ ಮಾದಾರ ಅಕ್ರಮವಾಗಿ ತಮ್ಮ ಹೆಂಡತಿಯ ಅಕೌಂಟಿಗೆ ಮನರೇಗಾ ಕೂಲಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ 2026ರ ಫೆಬ್ರವರಿ ತಿಂಗಳಲ್ಲಿ ಪ್ರಜಾನೆರಳು ದಿನಪತ್ರಿಕೆಯು ಸಾಕ್ಷಿ ಸಮೇತ ವರದಿ ಮಾಡಿತ್ತು. ಅಲ್ಲದೆ ಈ ಬಗ್ಗೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂದೆ ಇವರಿಗೆ ದೂರನ್ನು ಕೂಡ ನೀಡಲಾಗಿತ್ತು.
ನೀಲೇಶ ಮಾದಾರ ಇವರು ಎಸಗಿದ್ದ ಅಕ್ರಮದ ಬಗೆಗಿನ ಕಂಪ್ಯೂಟರ್ ದಾಖಲೆಗಳನ್ನು ಪ್ರಜಾನೆರಳು ದಿನಪತ್ರಿಕೆ ಸಾರ್ವಜನಿಕರ ಮುಂದೆ ಬಹಿರಂಗ ಮಾಡಿತ್ತು. ಜೊತೆಗೆ ಈತನ ಅವ್ಯವಹಾರಗಳ ಬಗ್ಗೆ ಸರಣಿ ವರದಿ ಪ್ರಕಟಿಸಿತ್ತು. ಕೊನೆಗೂ ಪತ್ರಿಕೆಯ ಸಮಾಜಮುಖಿ ವರದಿಗಾರಿಕೆಗೆ ಸ್ಪಂದಿಸಿರುವ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂದೆ ಇವರು ಭ್ರಷ್ಟ ನೀಲೇಶ ಮಾದಾರ ಇವರನ್ನು ಸೇವೆಯಿಂದ ಅಮಾನತುಗೊಳಿಸಿ (ಜೂನ್ 23 ರಂದು) ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಸಾಕಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಮಾನ್ಯ ಶ್ರೀ ರಾಹುಲ್ ಶಿಂದೆ ಇವರು ಇತರ ಕಡೆಗಳಲ್ಲೂ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಗ್ರಾಪಂ ವ್ಯಾಪ್ತಿಯಿಂದ ಹೊರಗಡೆ ವಾಸ
ಸರ್ಕಾರದ ನಿಯಮಾವಳಿಗಳ ಪ್ರಕಾರ ಗ್ರಾಮ ಪಂಚಾಯಿತಿಯೊಂದರಲ್ಲಿ ಕೆಲಸ ಮಾಡುವ ಸಿಬ್ಬಂದಿ ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುವುದು ಕಡ್ಡಾಯವಾಗಿದ್ದು, ಆದರೆ ಈ ಭೂಪ ನೀಲೇಶ ತಾವು ಕೆಲಸ ಮಾಡುತ್ತಿರುವ ಬೈಲೂರ ಗ್ರಾಪಂ ನಿಂದ 50 ಕಿಮೀ ದೂರದ ಗುಂಜಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಲೋಕಾಯುಕ್ತ ತನಿಖೆ ಅಗತ್ಯ:
ನೀಲೇಶ ಮಾದಾರ ಸುಮಾರು 10 ಲಕ್ಷ ರೂ. ಬೆಲೆ ಬಾಳುವ ಕಾರಿನಲ್ಲಿ ಓಡಾಡುತ್ತಾರೆ. ಪ್ರತಿದಿನ ಇದೇ ಕಾರಿನಲ್ಲಿ ಸುಮಾರು ನೂರು ಕಿಲೋಮೀಟರ್ ಪ್ರಯಾಣಿಸುತ್ತಾರೆ. ಹೀಗಿರುವಾಗ ಇವರು ಅಕ್ರಮ ಆಸ್ತಿ-ಪಾಸ್ತಿ ಕೂಡ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಕುರಿತು ಲೋಕಾಯುಕ್ತ ಪೊಲೀಸರು ಒಂದು ಬಾರಿ ಗಮನಿಸಿದರೆ ಮತ್ತಷ್ಟು ಅಕ್ರಮಗಳು ಹೊರಗೆ ಬರುವ ಸಾಧ್ಯತೆ ಇದೆ.















