ಖಾನಾಪುರ: ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿಯ ಬಗ್ಗೆ ಪ್ರಜಾ ನೆರಳು ದಿನಪತ್ರಿಕೆ ಸತತವಾಗಿ ವರದಿ ಮಾಡುತ್ತಿದೆ. ಈಗ ಆ ವರದಿಗಳ ಸರಣಿಗೆ ಮತ್ತೊಂದು ಗ್ರಾಮ ಪಂಚಾಯಿತಿಯ ಕರ್ಮಕಾಂಡದ ವರದಿ ಇಲ್ಲಿದೆ. ಖಾನಾಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಹಲಕರ್ಣಿ ಗ್ರಾಮ ಪಂಚಾಯಿತಿಯ ಅಕ್ರಮಗಳ ಬಗ್ಗೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಗ್ರಾಮದ ಜನತೆಯನ್ನು ಮಾತನಾಡಿಸಿದಾಗ ಪತ್ರಿಕೆಗೆ ತಿಳಿದು ಬಂದ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಹಲಕರ್ಣಿ ಗ್ರಾಪಂ ಪಿಡಿಒ ಆಗಿರುವ ರೇಷ್ಮಾ ಪಾಣಿವಾಲೆ ಮೇಡಂ ಜನರಿಂದ ದೂರವೇ ಇರುತ್ತಾರೆ ಎಂದು ಜನ ದೂರುತ್ತಿದ್ದಾರೆ. ಕಂಪ್ಯೂಟರ್ ಉತಾರ ಕೊಡಲು ಸತಾಯಿಸಲಾಗುತ್ತಿದೆ ಹಾಗೂ ಕಳೆದ ಹಲವಾರು ದಿನಗಳಿಂದ ಉತಾರ ಕೊಡುವುದನ್ನೇ ನಿಲ್ಲಿಸಲಾಗಿದೆ. ಉತಾರ ನೀಡಲು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಜನ ಗಂಭೀರವಾಗಿ ಆರೋಪಿಸುತ್ತಿದ್ದಾರೆ.
ಎಲ್ಲೆಡೆ ಸ್ವಚ್ಛ ಭಾರತ್ ಅಭಿಯಾನ ನಡೆಯುತ್ತಿದ್ದರೆ ಈ ಗ್ರಾಪಂ ವ್ಯಾಪ್ತಿಯಲ್ಲಿ ಇದಕ್ಕೆ ಬೆಲೆಯೇ ಇಲ್ಲವಾಗಿದೆ. ಖಾನಾಪುರ ಪಟ್ಟಣಕ್ಕೆ ಪ್ರವೇಶಿಸುವ ಪ್ರದೇಶವು ಸದರಿ ಹಲಕರ್ಣಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಆದರೆ ಈ ಪ್ರದೇಶದಲ್ಲಿ ಎಲ್ಲೆಲ್ಲೂ ಕಸ ತುಂಬಿಕೊಂಡಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಈ ಪ್ರದೇಶದಲ್ಲಿ ನ್ಯಾಯಾಲಯ, ಶಾಲೆ ಮುಂತಾದ ಸಾರ್ವಜನಿಕ ಕಚೇರಿಗಳಿದ್ದರೂ ನಿಯಮಿತವಾಗಿ ಸ್ವಚ್ಛತಾ ನಡೆಯುತ್ತಿಲ್ಲ ಎಂಬುದು ಕಣ್ಣಿಗೆ ಕಾಣುತ್ತಿದೆ. ಗ್ರಾಮವೊಂದಕ್ಕೆ ಪ್ರವೇಶಿಸುವಾಗ ಒಂದು ಕಮಾನು ಅಥವಾ ಒಂದು ಬೋರ್ಡ್ ಇರುತ್ತದೆ. ಆದರೆ ಈ ಗ್ರಾಮದ ಪ್ರವೇಶ ದ್ವಾರದಲ್ಲಿ ಮಾತ್ರ ಅಂಥ ಯಾವುದೇ ಕಮಾನು ಅಥವಾ ಸೈನ್ ಬೋರ್ಡ್ ಇಲ್ಲ. ಇದು ಗ್ರಾಪಂನ ನಿರ್ಲಕ್ಷದ ಆಡಳಿತವನ್ನು ಎತ್ತಿ ತೋರಿಸುತ್ತಿದೆ.
ಲೇಔಟ್ ಅಭಿವೃದ್ಧಿ ಮಾಡುತ್ತಿರುವ ಕೆಲ ಡೆವಲಪರ್ ಗಳಿಂದ ದೊಡ್ಡ ಪ್ರಮಾಣದ ಲಂಚ ಪಡೆದರೂ ಅವರಿಗೆ ಉತಾರ ಕೊಟ್ಟಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿವೆ. ಹಲಕರ್ಣಿ ಗ್ರಾಪಂ ವಿರುದ್ಧ ಗಂಭೀರ ಆರೋಪ ಮಾಡಿದ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ, ಗ್ರಾಮ ಪಂಚಾಯಿತಿಯವರು ಮಾಡಬೇಕಾದ ರಸ್ತೆ ಕಾಮಗಾರಿ, ಸ್ವಚ್ಛತೆ ಮುಂತಾದ ವಿಷಯಗಳಲ್ಲಿ ಹಲಕರ್ಣಿ ಗ್ರಾಪಂ ನಿರ್ಲಕ್ಷತೆ ವಹಿಸಿದೆ ಎಂದಿದ್ದಾರೆ.
ನ್ಯಾಯಾಲಯದ ಆದೇಶವಿದ್ದರೂ ಇಲ್ಲಸಲ್ಲದ ನೆಪ ಹೇಳುತ್ತ ಇಲ್ಲಿನ ಗ್ರಾಪಂ ಪಿಡಿಒ ರೇಷ್ಮಾ ಪಾಣಿವಾಲೆ ಇವರು ಉತಾರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.














