ಬೆಂಗಳೂರು: ಭಾರತದಲ್ಲಿ 79 ವರ್ಷಗಳ ಸ್ವಾತಂತ್ರ್ಯದ ನಂತರ ಕೂಡ ಮನುಷ್ಯನ ಆರೋಗ್ಯ, ಮರಗಿಡಗಳ ಮತ್ತು ಪ್ರಾಣಿ ಪಕ್ಷಿಗಳ ರಕ್ಷಣೆ ಕುರಿತು ಸ್ಥಳೀಯ ಸಂಸ್ಥೆಗಳು, ರಾಜ್ಯ, ಕೇಂದ್ರ ಸರ್ಕಾರ ಗಳ ನಿರಂತರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ತಿಳಿಸಿದರು.
ಭಾನುವಾರ ಸಂಜೆ ನಗರದ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಪರ್ವತಗಳ ಸಂರಕ್ಷಣೆ ಕುರಿತು ನಡೆದ ವಿಶೇಷ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯವಾಗಿ ಪರ್ವತಗಳ ಬಗೆಗಿನ ಕಾಳಜಿ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಇಲ್ಲದಾಗಿದೆ. ಆದರೆ ಎಲ್ಲರೂ ಇಡೀ ಜೀವಸಂಕುಲವೇ ಅವುಗಳ ಇರುವಿಕೆಯ ಮೇಲೆ ಅವಲಂಬಿತವಾಗಿದೆ. ನದಿಗಳಂತೂ ಪರ್ವತಗಳಿಲ್ಲದೆ ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಆದ್ದರಿಂದ ಪರ್ವತಗಳು ಮತ್ತು ನದಿಗಳ ಕುರಿತು ಈಗಾಗಲೇ ಇರುವ ಕಾಯ್ದೆಗಳನ್ನು ಕ್ರೋಢೀಕರಿಸಿ ಕೇಂದ್ರ ಸರ್ಕಾರ ಶಿಸ್ತುಬದ್ಧ ನಿಯಮಗಳನ್ನು ರೂಪಿಸಬೇಕು ಎಂದು ಹೇಳಿದರು.
ವಿಶ್ವದಲ್ಲಿ ಫ್ರಾನ್ಸ್, ಸ್ವಿಟ್ಜಲ್ಯಾಂಡ್, ಚೀನಾ ದೇಶಗಳಲ್ಲಿ ಮಾತ್ರ ಕಟ್ಟುನಿಟ್ಟಿನ ನಿಯಮಗಳನ್ನು ನಿಸರ್ಗವನ್ನು ಕಾಪಾಡುವ ನಿಟ್ಟಿನಲ್ಲಿ ರೂಪಿಸಿವೆ. ಸರ್ವೋಚ್ಛ ನ್ಯಾಯಾಲಯ ಹಲವಾರು ಆದೇಶಗಳಲ್ಲಿ ಮುಖ್ಯವಾಗಿ ಪರ್ವತಗಳ ಮತ್ತು ನದಿಗಳ ರಕ್ಷಣೆಯ ಕುರಿತು ಸಾಕಷ್ಟು ಕಳವಳವನ್ನು ವ್ಯಕ್ತಪಡಿಸಿದೆ. ವನ್ಯ ಜೀವಿಗಳ ರಕ್ಷಣೆಯ ಕುರಿತು ಕೂಡ ಸಾಕಷ್ಟು ಸೂಚನೆಗಳನ್ನು ಸ್ಥಳೀಯ ಸಂಸ್ಥೆಗಳು, ರಾಜ್ಯ, ಕೇಂದ್ರ ಸರ್ಕಾರಗಳಿಗೆ ನೀಡಿದೆ.
ಪತ್ರಿಕೆಗಳು ಮತ್ತು ಪತ್ರಕರ್ತರು ಕೂಡ ನಿಸರ್ಗ ಉಳಿಸಿ ಬೆಳಸುವ ಲೇಖನಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಸುವ ಕೆಲಸವನ್ನು ಮಾಡಬೇಕಿದೆ. ತನಿಖಾ ವರದಿಗಳ ಮೂಲಕ ಭ್ರಷ್ಟ ವ್ಯವಸ್ಥೆಯನ್ನು ಬಳಿಗೆಳೆಯುವ ಕೆಲಸವನ್ನು ಮಾಡಬೇಕಿದೆ. ಆಗ ಮಾತ್ರ ಸರ್ಕಾರ ಮತ್ತು ವ್ಯವಸ್ಥೆ ಈ ನಿಟ್ಟಿನಲ್ಲಿ ಕಾರ್ಯನ್ಮುಖವಾಗುತ್ತದೆ ಎಂದರು.
ಪರ್ವತಗಳ ಬಗ್ಗೆ ಯಾವುದೇ ರೀತಿಯ ಕಾಳಜಿಯನ್ನು ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾಗಲಿ ವಹಿಸುತ್ತಿಲ್ಲ. ಅವುಗಳಲ್ಲೇ ಸಕಲ ಜೀವರಾಶಿಗಳನ್ನು ಪೊರೆಯುವ ನೈಸರ್ಗಿಕ ಸಂಪತ್ತಾಗಿವೆ ಎಂದು ಸಂವಾದ ಕಾರ್ಯಕ್ರಮದಲ್ಲಿ ತರುಣ್ ಭಾರತ್ ಸಂಘದ ಅಧ್ಯಕ್ಷ ವಾಟರ್ ಮ್ಯಾನ್ ರಾಜೇಂದ್ರ ಸಿಂಗ್ ತಿಳಿಸಿದರು.
ಈ ವೇಳೆ ಜಲ್ ಬಿರಾದರಿ ಸಂಸ್ಥೆಯ ಸಂಯೋಜಕ ಸತ್ಯನಾರಾಯಣ ಬೋಲಿಶೆಟ್ಟಿ ಉಪಸ್ಥಿತರಿದ್ದರು.














