ಬೆಂಗಳೂರು: ತಸ್ತಿಕ್ ಪಡೆಯುವ ಅರ್ಚಕರಿಗೆ ಮಾಸಿಕ 10 ಸಾವಿರ ರೂ.ಗಳ ಗೌರವಧನ ನೀಡಕಬೇಕು ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿತು.
ಈ ಕುರಿತು ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಮಾತನಾಡಿ, 65 ವರ್ಷ ದಾಟಿದ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಮಾಸಿಕ 5 ಸಾವಿರ ರೂ.ಗಳ ಪಿಂಚಣಿ ನೀಡಬೇಕು. ಮುಂಬರುವ ಬಜೆಟ್‌ನಲ್ಲಿ ತಸ್ತೀಕ್ ಮೊತ್ತವನ್ನು 72 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಿ ವರ್ಗಗಳ ಮುಜರಾಯಿ ದೇವಾಲಯಗಳ ಅರ್ಚಕರು ಮರಣ ಹೊಂದಿದ್ದಲ್ಲಿ ನೀಡುತ್ತಿರುವ 2 ಲಕ್ಷ ಪರಿಹಾರ ಹಣವನ್ನು 5 ಲಕ್ಷ ರೂ ಗಳಿಗೆ ಹೆಚ್ಚಿಸಬೇಕು. ಇತ್ತೀಚಿಗೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಮುಜರಾಯಿ ದೇವಾಲಯಗಳ ಪೂಜೆ ಮಾಡುತ್ತಿರುವ ಅರ್ಚಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅದು ಇನ್ನೂ ಹೆಚ್ಚಾಗುವ ಸಂಭವವಿದೆ. ಇದನ್ನು ತಡೆಗಟ್ಟಲು ಸೂಕ್ತ ಕಾನೂನು ತಂದು ಅರ್ಚಕರಿಗೆ ರಕ್ಷಣೆ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಆದೇಶಿಸಬೇಕು ಆಗ್ರಹಿಸಿದರು.
ಆ.5ಕ್ಕೆ ಅರ್ಚಕರ ಬೃಹತ್ ಸಮಾವೇಶ:
ಸಂಘದ ವತಿಯಿಂದ ಆ.5ರಂದು ವಸಂತನಗರದ ಡಾ.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಕಾಡಸಿದ್ದೇಶ್ವರ ಮಠದ ಡಾ.ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀ ಸಮಾರಂಭದ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಡಿ .ಕೆ.ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಇತರೆ ಸಚಿವರು, ಶಾಸಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ವಿ.ರಾಮತೀರ್ಥನ್, ಎಂ.ಎ.ಶ್ರೀನಿವಾಸಯ್ಯ, ಎಚ್.ಎಸ್.ಗುರು ದೀಕ್ಷಿತ್, ಡಾ.ಶಶಿಶೇಖರ್ ದೀಕ್ಷಿತ್ ಇತರರಿದ್ದರು.














