ಬೆಂಗಳೂರು: ಕೆಪಿಎಸ್ಸಿ ನಡೆಸಿದ ಪಶುವೈದ್ಯಾಧಿಕಾರಿ ನೇಮಕದಲ್ಲಿ 300 ರಿಂದ 400 ಕೋಟಿ ಲಂಚದ ವ್ಯವಹಾರ ನಡೆದಿದ್ದು, ಅದರಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಎಷ್ಟು ಪಾಲಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದರು.
ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕೆ.ಪಿ.ಎಸ್.ಸಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಪಿಎಸ್ಸಿ ಮೂಲಕ ನಡೆದ ಎಲ್ಲಾ ನೇಮಕಾತಿ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು. ಸರ್ಕಾರವನ್ನು ಎಚ್ಚರಿಸಲು ವಿದ್ಯಾರ್ಥಿಗಳು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೊಂದಿಗೆ ಬಿಜೆಪಿ ಇರಲಿದೆ. ಸದನದ ಹೊರಗೆ ಮತ್ತು ಒಳಗೆ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಿದೆ. ಕಳೆದ ಹಲವಾರು ವರ್ಷಗಳಿಂದ ಕೆಪಿಎಸ್ಸಿ ನೇಮಕದಲ್ಲಿ ಅಕ್ರಮಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಕೆಪಿಎಸ್ಸಿಯಲ್ಲಿ ಸುಧಾರಣೆ ಮಾಡದೆ ಕತ್ತೆ ಕಾಯುತ್ತಿದೆಯೇ ಎಂದು ಪ್ರಶ್ನಿಸಿದರು.
ಕೆಪಿಎಸ್ಸಿ ನೇಮಕದಲ್ಲಿ ಲಕ್ಷಗಟ್ಟಲೆ ಲಂಚ ಪಡೆದು ಯಾರು ಅರ್ಹರಿಲ್ಲವೊ ಅವರಿಗೆ ಕೆಲಸ ಕೊಡುವ ಕಾರ್ಯದಲ್ಲಿ ರಾಜ್ಯ ಸರ್ಕಾರ ಕಪಟ ನಾಟಕ ಆಡುತ್ತಿದೆ. ಎಫ್ಡಿಎ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿವೆ. ಪರೀಕ್ಷೆಗಳಲ್ಲಿ ಹಣ ಪಡೆದು ಅನರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ರೂಪುಗೊಂಡಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕ, ಸಂಗೀತ, ಕನ್ನಡ, ವಿಜ್ಞಾನ, ಹಿಂದಿ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿ ಹಾಗೂ ಜಿಪಿಎಸ್ಟಿಆರ್ ಸೇರಿದಂತೆ ಹಲವು ಹುದ್ದೆಗಳ ನೇಮಕ ಕಳೆದ 15 ರಿಂದ 20 ವರ್ಷಗಳಿಂದ ನಡೆದಿಲ್ಲ. ಅರ್ಜಿ ಸಲ್ಲಿಸಲು ಅವರ ವಯೋಮಿತಿ ಮೀರುತ್ತಿದೆ. ಬಯೋಟೆಕ್ನಾಲಜಿ, ಚಿತ್ರಕಲೆ, ಬಿ.ಕಾಂ., ಬಿ.ಎಡ್. ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಸಾವಿರಾರು ಅಭ್ಯರ್ಥಿಗಳು ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಉದ್ಯೋಗ ಸಿಗದೆ ಅವರ ಬದುಕು ಕಷ್ಟಕ್ಕೆ ಸಿಲುಕುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಸಿಬಿಐ ತನಿಖೆಗೆ ಒತ್ತಾಯ:
ಉದ್ಯೋಗಕ್ಕಾಗಿ ಯುವಜನರು ಹುಬ್ಬಳ್ಳಿ, ಧಾರವಾಡ ಕಲಬುರಗಿಯಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಆಗಲೂ ಬಿಜೆಪಿ ವಿದ್ಯಾರ್ಥಿಗಳ ಪರವಾಗಿ ನಿಂತಿತ್ತು. ಯುವ ಜನರ ಸಮಸ್ಯೆಗಳನ್ನು ಸರ್ಕಾರ ಆಲಿಸುತ್ತಿಲ್ಲ. ಕೆಪಿಎಸ್ಸಿ ನಡೆಸಿದ ಎಲ್ಲಾ ನೇಮಕಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಯುಪಿಎಸ್ಸಿ ಮಾದರಿ ಪರೀಕ್ಷೆ ಆಗಲಿ:
ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುತ್ತಲೇ ಇವೆ. ಇದರ ಸಮಗ್ರ ತನಿಖೆಯನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಕೆಪಿಎಸ್ಸಿಯಲ್ಲಿ ಸುಧಾರಣೆ ತರಲು ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲ. ಆದ್ದರಿಂದ ಯುಪಿಎಸ್ಸಿ ಮಾದರಿ ಪರೀಕ್ಷೆ ಆಗಬೇಕಿದೆ. ಭ್ರಷ್ಟಾಚಾರ ಮುಕ್ತ ನೇಮಕಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪರೀಕ್ಷಾ ಪ್ರಕ್ರಿಯೆಯಿಂದ ಫಲಿತಾಂಶದವರೆಗೆ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುವ ಸುಧಾರಣಾ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು ಹೇಳಿದರು.
ಮಾನ ಮರ್ಯಾದೆ ಇಲ್ಲವೇ?
ಈ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲಿ. ಗ್ಯಾರಂಟಿಗಳ ಬಗ್ಗೆ ಮಾತನಾಡುವವರು ರಾಜ್ಯದ ಲಕ್ಷಾಂತರ ಮಕ್ಕಳ ಜೊತೆ ಚೆಲ್ಲಾಟ ಆಡುವುದನ್ನು ಇನ್ನಾದರೂ ನಿಲ್ಲಿಸಲಿ. ಅವರ ಬದುಕಿಗೆ ಕೆಲಸದ ಗ್ಯಾರಂಟಿ ನೀಡಲಿ. 2.5 ಲಕ್ಷ ಹುದ್ದೆ ಖಾಲಿ ಇದ್ದರೂ ನಾಲಾಯಕ್ ಸರ್ಕಾರಕ್ಕೆ ತುಂಬಲು ಆಗಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಕಿವಿ ಹಿಂಡುತ್ತೇವೆ:
ಕೆಪಿಎಸ್ಸಿ ಅಕ್ರಮ ಸೇರಿದಂತೆ ಉದ್ಯೋಗಾಕಾಂಕ್ಷಿಗಳ ಸಮಸ್ಯೆಗಳನ್ನು ಪರಿಹಾರ ಮಾಡದ ರಾಜ್ಯ ಸರ್ಕಾರದ ಕಿವಿಯನ್ನು ಹಿಂಡುವ ಕೆಲಸವನ್ನು ಬಿಜೆಪಿ ಮಾಡಲಿದೆ. ಯುವ ಜನರ ಧ್ವನಿಯಾಗಿ ಸದನದ ಹೊರಗೆ ಮತ್ತು ಒಳಗೆ ಕೆಲಸ ಮಾಡುತ್ತೇವೆ. ಎಲ್ಲ ಶಾಸಕರು ಒಕ್ಕೊರಲಿನಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹೈಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ:
ಈ ಹಿಂದೆ 2.5 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ ಆದಾಗ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಯುವಕರಿಗೆ ಸಹ ಅವಕಾಶ ನೀಡಿರಲಿಲ್ಲ. ಆಗ ಅವರು ಹೈಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ನೋವಿನ ಸಂಗತಿಯಾಗಿದೆ. ರಾಜ್ಯ ಸರ್ಕಾರದ ಇಂತಹ ಅಸಡ್ಡೆ ಮತ್ತು ನಿರ್ಲಕ್ಷ್ಯ ಒಳ್ಳೆಯದಲ್ಲ. ಮುಖ್ಯಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಬಣ್ಣ ಬಣ್ಣದ ಮಾತುಗಳಿಂದ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ ಎಂದರು.














