ಬೆಂಗಳೂರು: ಈಗಿನ ಕಾಲದ ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿದ್ದು, ಇದನ್ನು ತಡೆದು ಅವರನ್ನು ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಗಮನ ಹರಿಸುವಂತೆ ಮಾಡುವುದು ಪೋಷಕರ ಕರ್ತವ್ಯವಾಗಿದೆ ಎಂದು ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ್ ಬಿ ಗೌಡ ಹೇಳಿದರು.
ಸೋಮವಾರ ಸಂಜೆ ನಗರದ ನಯನ ಸಭಾಂಗಣದಲ್ಲಿ ಕಲಾಮಂಡಪ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ನೃತ್ಯ ಸ್ಪರ್ಧೆ- 2026 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರಸಿದ್ಧ ನೃತ್ಯಗಾರ್ತಿ ಡಾ ಬಿನು ತಂಗೀನ್ ಇಂತಹ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಕನ್ನಡ ಮತ್ತು ಕರ್ನಾಟಕದ ಬಗೆಗಿನ ಪ್ರೀತಿ ಇಂದಿನ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿದೆ. ಪೋಷಕರು ಹಾಗೂ ಮಕ್ಕಳಿಗೆ ಅವರು ಪ್ರದರ್ಶನ ಕಲೆಗಳ ಕುರಿತು ತುಂಬುತ್ತಿರುವ ಸ್ಪೂರ್ತಿ ಎಂಥವರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ನಮ್ಮ ಸಾಹಿತ್ಯ ಕೂಟದಿಂದ ಸಹ ವಕೀಲರು, ಮಕ್ಕಳಿಗೆ, ಸಾರ್ವಜನಿಕರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇತರ ಕಲಾ ಸಂಘ, ಸಂಸ್ಥೆಗಳ ಜೊತೆ ಸಹಯೋಗದಲ್ಲಿ ಕೂಡ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ಸಮಸ್ಯೆಯನ್ನು ಹೊಂದಿರುವ ಮತ್ತು ಅನಾರೋಗ್ಯ ಪೀಡಿತ ಕಲಾವಿದರಿಗೆ ಸಹಾಯ ಹಸ್ತ ಚಾಚುವ ಯೋಜನೆಗಳನ್ನು ಸಹ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.
ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ವಕೀಲರ ಸಾಹಿತ್ಯಕೂಟದ ಖಜಾಂಚಿ ಹರೀಶ್ ಜೆ ಮಾತನಾಡಿ, ನಮ್ಮ ನಾಡು, ನುಡಿ, ಕಲೆ ಸಂಸ್ಕೃತಿಯನ್ನು ಸಂಭ್ರಮಿಸುವುದು ಮತ್ತು ಅದಕ್ಕೆ ಪೂರಕ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಕರ್ನಾಟಕದ ಹೆಮ್ಮೆ ವರನಟ ಡಾ ರಾಜಕುಮಾರ್ ಅವರು ಕೇವಲ 4ನೇ ತರಗತಿ ಓದಿದರೂ ಕಲೆಯನ್ನೇ ಉಸಿರಾಗಿಸಿಕೊಂಡು ಬದುಕಿ ಇಡೀ ದೇಶದ ಜನತೆಗೆ ಸ್ಪೂರ್ತಿ ಮತ್ತು ಮಾದರಿಯಾಗಿ ಬೆಳೆದರು. ಇಂತಹ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಿಕೊಂಡು ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಲಾವಿದರಾಗಲು ಅನೇಕ ತಪಸ್ಸುಗಳನ್ನು ಮಾಡಬೇಕು. ಸಂಗೀತ, ಸಾಹಿತ್ಯ ಸೇರಿದಂತೆ ಯಾವುದೇ ಕಲೆಗಳನ್ನು ಮೈಗೂಡಿಸಿಕೊಳ್ಳಲು ಪೂರ್ವಜನ್ಮದ ಪುಣ್ಯ ಕಾರಣ. ಜೊತೆಗೆ ದೇವರ ಆಶೀರ್ವಾದದಿಂದ ಜನ ಮೆಚ್ಚುಗೆ ಪಡೆಯಲು ಸಾಧ್ಯ. ನಮ್ಮ ನಾಡು, ನುಡಿಗೆ ಸಹ ಸೇವೆಯನ್ನು ಸಲ್ಲಿಸಲು ಸಹ ಇವುಗಳಿಂದ ಸಾಧ್ಯವಾಗಲಿದೆ ಎಂದರು.
9 ರಾಜ್ಯಗಳಿಂದ ನೃತ್ಯ ಕಲಾ ಸ್ಪರ್ಧಿಗಳು ಇಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 5 ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚಿಕ್ಕ ಮಕ್ಕಳಿಂದ ವಯಸ್ಕರ ವರೆಗೆ ಹಲವು ಕಲಾವಿದರು ಪ್ರದರ್ಶನವನ್ನು ನೀಡಿದ್ದಾರೆ. ನಾನು ಹೈದರಾಬಾದ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ, ಆದರೆ ಬೆಂಗಳೂರಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಇಂದು ಈಡೇರಿರುವುದು ಸಂತಸ ತಂದಿದೆ ಎಂದು ಆಯೋಜಕಿ ಡಾ ಬಿನು ತಂಗೀನ್ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಫೋರಂ ಅಧ್ಯಕ್ಷ ಮಹೇಶ್ ಬಾಬು ಸುರಿವೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.














