ಬೆಂಗಳೂರು: ಶ್ರವಣದೋಷವುಳ್ಳ ಮಕ್ಕಳು ಸೇರಿದಂತೆ ಎಲ್ಲಾ ವಿಶೇಷ ಚೇತನ ಮಕ್ಕಳಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಸಮಾನ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಇಂತಹ ಮಕ್ಕಳಿಗಾಗಿ ಆಯೋಜಿಸುವ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಲು ಸಿದ್ಧವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಶನಿವಾರ ಶಿಕ್ಷಕರ ಸದನದಲ್ಲಿ ನಡೆದ ಜನಪದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಸಂಗೀತ ಕೇಳಿಸುವುದಿಲ್ಲ. ಆದರೂ ತಮಟೆಯ ಕಂಪನ ಹಾಗೂ ತರಬೇತಿಯ ಮೂಲಕ ಅವರು ಅದ್ಭುತವಾಗಿ ನೃತ್ಯ ಪ್ರದರ್ಶಿಸಿದ್ದಾರೆ. ಎಲ್ಲ ಮಕ್ಕಳಂತೆ ಇವರಿಗೂ ವೇದಿಕೆ ಸಿಗಬೇಕು ಎಂಬ ಉದ್ದೇಶದಿಂದ ಶ್ರವಣ ಗೆಜ್ಜೆ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಶಿಕ್ಷಕ, ಶಿಕ್ಷಕೇತರ ಸಂಘದ ಉಪಾಧ್ಯಕ್ಷ ರವೀಂದ್ರ ಮಾತನಾಡಿ, ಯಾವುದೇ ಶಾಲೆಗೆ ಸೇರದ ಶ್ರವಣದೋಷವುಳ್ಳ ಬಾಲಕಿಯೊಬ್ಬಳು ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ಕೇಳಿಕೊಂಡು ಬಂದಿದ್ದರಿಂದ, ಸ್ಪರ್ಧೆಯಲ್ಲದಿದ್ದರೂ ಆಕೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷೆ ಸೌಮ್ಯ ಮಾತನಾಡಿ, ವಿಶೇಷ ಮಕ್ಕಳಿಗೆ ಸಮಾಜ ಹಾಗೂ ಸರ್ಕಾರದಿಂದ ಹೆಚ್ಚಿನ ಬೆಂಬಲ ಅಗತ್ಯವಿದೆ. ಮಾಧ್ಯಮಗಳ ಸಹಕಾರದಿಂದ ಈ ಮಕ್ಕಳ ಪ್ರತಿಭೆ ಜನರಿಗೆ ತಲುಪಬೇಕು. ಜೊತೆಗೆ ವಿಶೇಷ ಶಿಕ್ಷಕರು ಹಾಗೂ ಕೇರ್‌ಟೇಕರ್‌ಗಳ ವೇತನದಲ್ಲಿ ಶೇ.40ರಷ್ಟು ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಸರ್ಕಾರ ಈ ಕಾರ್ಯಕ್ರಮಕ್ಕೆ ಯಾವುದೇ ಅನುದಾನ ನೀಡಿಲ್ಲ. ಸಂಘದ ಸದಸ್ಯರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ, ಸುಮಾರು 184 ವಿಶೇಷ ಶಾಲೆಗಳಿಗೆ ನಾಲ್ಕು ತಿಂಗಳಿನಿಂದ ಶಿಶುಕೇಂದ್ರಿತ ಅನುದಾನ ಬಿಡುಗಡೆಯಾಗಿಲ್ಲ ಎಂದರು.
ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಪ್ರಸ್ತುತ ಸುಮಾರು 20,250 ರೂಪಾಯಿ ಹಾಗೂ ಕೇರ್‌ಟೇಕರ್‌ಗಳಿಗೆ 9,000 ರಿಂದ 13,000 ಸಂಭಾವನೆ ಮಾತ್ರ ದೊರೆಯುತ್ತಿದೆ. ಸರ್ಕಾರ ತಕ್ಷಣವೇ ಶೇ.40ರಷ್ಟು ವೇತನ ಹೆಚ್ಚಳ ಜಾರಿಗೊಳಿಸಿ, ಬಾಕಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ- ಶಿಕ್ಷಕೇತರರ ಸಂಘದ ಕಾರ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.














