ಬೆಂಗಳೂರು: ರಾಜಧಾನಿಯಲ್ಲಿ 10 ಸಾವಿರ ಕೋಟಿ ಮತ್ತು ರಾಜ್ಯದಲ್ಲಿ 50 ಸಾವಿರ ಕೋಟಿ ರೂಪಾಯಿ ಬೆಲೆಯ ಒತ್ತುವರಿ ಅರಣ್ಯಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.
ಶುಕ್ರವಾರ ಯಶವಂತಪುರ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಸಂಸ್ಥೆ ಸಿ.ಎಸ್.ಆರ್ ನಿಧಿ ಅಡಿಯಲ್ಲಿ ಬಂಡಿಪುರ, ಮಲೆಮಹದೇಶ್ವರ ಬೆಟ್ಟದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಾ ಕ್ಯಾಬಿನ್ ಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ, ಪ್ರಕೃತಿಯನ್ನು ಪ್ರತಿಯೊಬ್ಬರು ಉಳಿಸಲು ಬೆಳಸಲು ಶ್ರಮಿಸಬೇಕು. ಹವಮಾನ ಬದಲಾವಣೆ ಮತ್ತು ಬರ, ಬಿಸಿಲು ಮತ್ತು ಮಳೆ ಸಕಾಲಕ್ಕೆ ಆಗಬೇಕು ಅದರೆ ಹವಮಾನ ವೈಪರೀತ್ಯದಿಂದ ಸಮರ್ಪಕವಾಗಿ ಆಗುವುದಿಲ್ಲ. ಇದರಿಂದ ಪ್ರವಾಹ, ತಾಪಮಾನ ಹೆಚ್ಚಳವಾಗಿದೆ. ತಾಪಮಾನ 40 ರಿಂದ 48 ಡಿಗ್ರಿವರಗೆ ತಲುಪುತ್ತಿದೆ ಎಂದು ಹೇಳಿದರು.
ಕಾರವಾರ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಕೃತಿ ಪರಿಸರ ಹೇರಳವಾಗಿದೆ. ವೈವಿಧ್ಯಮಯ ಪ್ರಾಣಿ, ಪಕ್ಷಿಗಳು ಜೀವಿಸುತ್ತಿದೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇದೇ ಸಮಯದಲ್ಲಿ ದುಬಾರೆ ಆನೆ ತರಬೇತಿ ಕೇಂದ್ರದಲ್ಲಿ ಆನೆ ದಾಳಿಯಿಂದ ಮಹಿಳೆ ಸಾವು ಸಂಭವಿಸಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ಬಂಡಿಪುರದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದೆ ದೇಶದಲ್ಲಿ ಎರಡನೇಯ ಸ್ಥಾನದಲ್ಲಿ ಇದೆ ಮತ್ತು ಆನೆಗಳ ಸಂತತಿ ದೇಶದಲ್ಲಿ ಅತಿ ಹೆಚ್ಚು ನಮ್ಮ ರಾಜ್ಯದಲ್ಲಿ ಇದೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷದಲ್ಲಿ ಪ್ರತಿವರ್ಷ 30 ರಿಂದ 40 ಸಾವು ಸಂಭವಿಸುತ್ತಿದೆ. ಇದರ ಮೇಲೆ ಕ್ರಮ ಕೈಗೊಳ್ಳಲು ಅರಣ್ಯಧಿಕಾರಿಗಳು, ಸಿಬ್ಬಂದಿಗಳು ಆನೆ, ಹುಲಿ, ಚಿರತೆಗಳನ್ನು ಕಾಡಿಗೆ ಕಳುಹಿಸುವ ಕಾರ್ಯದ ನಿಮಿತ್ತ ಹಗಲಿರುಳು ದುಡಿಯುತ್ತಿದ್ದಾರೆ. ಅವರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎಂ.ಇ.ಐ.ಸಂಸ್ಥೆಯ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಸಾಮಾಜಿಕ ಜವಾಬ್ದಾರಿ ನಿಧಿ ಸಿ.ಎಸ್.ಆರ್ ಅಡಿಯಲ್ಲಿ ಈಗಾಗಲೇ ಶಾಲೆಗಳಿಗೆ ಸ್ಪಾರ್ಟ್ ಕ್ಲಾಸ್ ಗಳಿಗೆ ಅನುದಾನ ನೀಡಲಾಗಿದೆ. ಈಗ ವನ್ಯ ಜೀವಿ ಪರಿಪಾಲಕರು, ಸಿಬ್ಬಂದಿಗಳಿಗೆ ಅನುಕೂಲವಾಗಲಿ ಎಂದು ಸುರಕ್ಷಾ ಕ್ಯಾಬಿನ್ ನೀಡಲಾಗುತ್ತಿದೆ. ಪರಿಸರ ಉಳಿದರೆ ಮಾನವ ಕುಲ ಉಳಿಯುತ್ತದೆ ಎಂದರು.
ಅರಣ್ಯ ಸಿಬ್ಬಂದಿಗಳು, ಆನೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ಸಹಾಯಹಸ್ತ ಹಾಗೂ ಅರಣ್ಯ ಪ್ರದೇಶ ವ್ಯಾಪ್ತಿಯ ಶಾಲೆಗಳ ಅಭಿವೃದ್ದಿ, ಕುಡಿಯುವ ನೀರಿನ ವ್ಯವಸ್ಥೆ ಸಹ ನಮ್ಮ ಸಂಸ್ಥೆ ಸಿ.ಎಸ್.ಆರ್ ನಿಧಿಯಲ್ಲಿ ಮಾಡಿದೆ. ಇನ್ನು ಅರಣ್ಯ ಭೂಮಿ ಉಳಿಸಲು ಸಚಿವರಾದ ಈಶ್ವರ್ ಖಂಡ್ರೆ ಅಪಾರ ಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಎಂ.ಇ.ಐ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಆನಿತಾ, ಕೆ.ಪಿ.ಸಿ.ಸಿ ವಕ್ತಾರ ಲಕ್ಷ್ಮಣ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.














