ಬೆಂಗಳೂರು: ಮಹಿಳಾ ಮೀಸಲಾತಿ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿಯ ನಿಲುವು ಅಂದಿನಿಂದ ಇಂದಿನವರೆಗೆ ಒಂದೇ ಆಗಿದೆ. ಸಂಸತ್ತಿನಲ್ಲಿ ಈ ಹಿಂದೆ ಮಂಡನೆಯಾದಾಗೆಲ್ಲ ಬಿಜೆಪಿ ವಿರೋಧ ಪಕ್ಷದಲ್ಲಿದ್ದರೂ ಬೆಂಬಲ ನೀಡಿದೆ. ಆದರೆ ನರೇಂದ್ರ ಮೋದಿ ಅವರಿಗೆ ಇದರ ಯಶಸ್ಸಿನ ಲಾಭ ಸಿಗುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ಲೇಷಿಸಿದರು.
ಭಾನುವಾರ ಮಹಿಳಾ ಮೀಸಲು ಮಸೂದೆಗೆ ಲೋಕಸಭೆಯಲ್ಲಿ ವಿರೋಧ ಮಾಡಿದ ಕಾಂಗ್ರೆಸ್ ಧೋರಣೆ ಖಂಡಿಸಿ ಜಯನಗರದ ಆರ್.ವಿ ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಬಲ ನಾರಿ- ಸಮರ್ಥ ಭಾರತ ಸಂವಾದದಲ್ಲಿ ಅವರು ಮಾತನಾಡಿದರು. ಮಹಿಳಾ ಮೀಸಲಾತಿ ಮಸೂದೆ ಚರ್ಚೆ ಆರಂಭವಾಗಿದ್ದು 1992 ರಲ್ಲಿ. ಅಂದಿನಿಂದ ಈವರೆಗೆ ಬಿಜೆಪಿಯ ಒಂದೇ ನಿಲುವು ಇದೇ ಆಗಿದೆ. ಅದು ಮಹಿಳೆಯರಿಗೆ ಶೇ 33 ಮೀಸಲಾತಿಯನ್ನು ಆದಷ್ಟು ಬೇಗ ನೀಡುವುದಾಗಿದೆ. ಇದು ಕೇವಲ ಭಾಷಣಕ್ಕೆ ಸೀಮತವಾದ ಬದ್ಧತೆ, ಬೆಂಬಲ ಅಲ್ಲ. ಈ ಮಸೂದೆಯನ್ನು ಕಾಂಗ್ರೆಸ್ ಸರ್ಕಾರಗಳು ಸಂಸತ್ತಿನಲ್ಲಿ ಮಂಡಿಸಿದಾಗ ಬಿಜೆಪಿ ಬೆಂಬಲ ನೀಡಿದೆ. 1992 ರಿಂದ ಈವರೆಗೆ ಒಂದಲ್ಲ ಒಂದು ನೆಪ ಹೇಳಿಕೊಂಡು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸದೆ ಸೋಲು ಉಂಟಾಗುವಂತೆ ಮಾಡಿದೆ ಎಂದು ದೂರಿದರು.
ಮಹಿಳಾ ಮೀಸಲು ಮಸೂದೆಗೆ ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್ ಗಲಾಟೆ ಮಾಡಿದರು. ಮತ್ತೊಂದು ಬಾರಿ ಸಂಸತ್ತಿನ ಬಾವಿಗಿಳಿದು ಮಸೂದೆ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ಕಾನೂನು ಸಂವಿಧಾನದ ಒಳಗೆ ಬರಲೇ ಇಲ್ಲ. ಏನಾದರೂ ಒಂದು ಕುಂಟು ನೆಪ ಮುಂದಿಟ್ಟರು. ಮೋದಿ ಸರ್ಕಾರ ಸಂವಿಧಾನ ತಿದ್ದುಪಡಿ ತಂದು 40 ವರ್ಷದಲ್ಲಿ ಆಗದೇ ಇದ್ದುದನ್ನು ಮಾಡಲು ಮುಂದಾಯಿತು. ಆದರೆ ಈಗ ಕಾಂಗ್ರೆಸ್ ಬೇರೆ ನೆಪ ಹೇಳಿ ವಿರೋಧ ಮಾಡಿದೆ ಎಂದರು.
2021 ರಲ್ಲಿ ಗಣತಿ ಆಗಲಿಲ್ಲ. ಈಗ ಗಣತಿ ಮಾಡಿ ಮುಗಿಯುವವರೆಗೆ ಕಾದರೆ ವಿಳಂಬ ಆಗುತ್ತದೆ ಎಂದು ತಿದ್ದುಪಡಿ ತಂದು 2021 ರ ಗಣತಿ ಪ್ರಕಾರವೇ ಮೀಸಲಾತಿ ಕೊಡೋಣ ಎಂದು ತೀರ್ಮಾನ ಮಾಡಿದೆವು. ಅದನ್ನು ಕಾಂಗ್ರೆಸ್ ವಿರೋಧಿಸಿದೆ. 1971 ರಲ್ಲಿ ಲೋಕಸಭಾ ಕ್ಷೇತ್ರಗಳ ಸ್ಥಾನ 543 ಇರಬೇಕು ಎಂದು ನಿರ್ಧಾರವಾಗಿದೆ. ಆಗ ದೇಶದ ಜನಸಂಖ್ಯೆ 55 ಕೋಟಿ ಇತ್ತು. ಈಗ 140 ಕೋಟಿ ಆಗಿದೆ. ಇಷ್ಟಾದರೂ ಕ್ಷೇತ್ರ ವಿಂಗಡಣೆ ಬೇಡ ಎಂದು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳಾ ಮೀಸಲಾತಿ ಜಾರಿಯಾದರೆ ನರೇಂದ್ರ ಮೋದಿ ಅವರ ಪರವಾಗಿ ಮಹಿಳೆಯರು ಇರುತ್ತಾರೆ. ಬಿಜೆಪಿಗೆ ಓಟು ಜಾಸ್ತಿ ಆದರೆ ಎಂಬ ಭಯ ಕಾಂಗ್ರೆಸ್‍ಗೆ ಎಂದರು.
ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಜನಸಂಖ್ಯೆ ವಿಪರೀತ ಇರುವ ಕಾರಣ ಸಂಸದರು ಮತ್ತು ಶಾಸಕರಿಗೆ ಜನರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಜಾಸ್ತಿ ಆಗಬೇಕು ಎಂದು ಮೋದಿ ಬಯಸಿದ್ದರು. ಆದರೆ ಇದನ್ನು ತಿಳಿಯದೇ ವಿರೋಧಿಸಿದರು. ಬೆಂಗಳೂರಿನಲ್ಲಾದರೆ ಒಂದು ಬಿಬಿಎಂಪಿ ಸಾಲದು ಎಂದು ಐದು ನಗರ ಪಾಲಿಕೆ ಮಾಡಿ ಗ್ರೇಟರ್ ಬೆಂಗಳೂರು ಮಾಡಿದರು. ವಾರ್ಡ್ ಜಾಸ್ತಿ ಮಾಡಿದರು. ಕಾರಣ ಬೆಂಗಳೂರು ಬೆಳೆದಿದೆ, ಜನಸಂಖ್ಯೆ ಹೆಚ್ಚಿದೆ. ಪಾಲಿಕೆ ಸದಸ್ಯರಿಗೆ ನಿಭಾಯಿಸಲು ಆಗಲ್ಲ ಎಂದು. ಇದನ್ನೇ ಮೋದಿಜೀ ಮಾಡಿದರೆ ಬೇಡ ಎನ್ನುತ್ತಾರೆ. ಆದ್ದರಿಂದ ಕಾಂಗ್ರೆಸ್ ಡೋಂಗಿತನ ಜನರಿಗೆ ತಿಳಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ತಾವು ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ಈಗ ಕ್ಷೇತ್ರ ಹಂಚಿಕೆ ಮಾಡಬಾರದು ಎಂದು ಸಂಚು ನಡೆಸಿದೆ. ಜನಗಣತಿ ಆಧಾರದ ಮೇಲೆಯೇ ಮಾಡುವುದಾದರೆ ಉತ್ತರ ಭಾರತದಲ್ಲಿ ಜಾಸ್ತಿ ಕ್ಷೇತ್ರ ಆಗುತ್ತದೆ. ಆದ್ದರಿಂದ ಈಗಿರುವ ಕ್ಷೇತ್ರಗಳಿಗೆ ಶೇ 50 ರಷ್ಟು ಹೆಚ್ಚಳ ಮಾಡೋಣ ಎಂದು ಮೋದಿಜೀ ಹೇಳಿದರು. ಆಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ಆದರೆ ಅದನ್ನೂ ವಿರೋಧಿಸಿದರು. ಭಾರತವನ್ನು ವಿಭಜಿಸುವುದು ಬಿಜೆಪಿ ನೀತಿ ಅಲ್ಲ. ಏಕ ಭಾರತ ಶ್ರೇಷ್ಠ ಭಾರತವೇ ನಮ್ಮ ಪಕ್ಷದ ನೀತಿ ಎಂದು ಹೇಳಿದರು
ದಕ್ಷಿಣ ಭಾರತದ ಸಂರಕ್ಷಕರು ಎಂದು ಹೇಳಿ ಆ ರಾಜ್ಯಗಳಿಗೆ ಕಾಂಗ್ರೆಸ್ ನಷ್ಟ ಮಾಡುತ್ತಾ ಇದೆ. ಆದಾಯ, ಜಿಡಿಪಿ ಜಾಸ್ತಿ ಇರುವವರಿಗೆ ಹೆಚ್ಚು ಸ್ಥಾನ ಮತ್ತು ಓಟು ನೀಡುವುದಾದರೆ ಮುಕೇಶ್ ಅಂಬಾನಿಯನ್ನೇ ಪ್ರಧಾನಿ ಮಾಡಬೇಕಾಗುತ್ತದೆ. ಓಟನ್ನು ಚುನಾವಣಾ ಆಯೋಗ ನಿರ್ಧರಿಸುವ ಬದಲು ಹಣಕಾಸು ಸಚಿವಾಲಯವೇ ನಿರ್ಧಾರ ಮಾಡಬೇಕಾಗುತ್ತಿದೆ. ಮಹಿಳೆಯರಿಗೆ ಮೀಸಲಾತಿ ಸಿಗಬಾರದು ಎಂಬ ಒಂದೇ ಕಾರಣದಿಂದ ಕಾಂಗ್ರೆಸ್ ವಿರೋಧ ಮಾಡುತ್ತಾ ಇದೆ ಎಂದು ತೇಜಸ್ವಿ ಸೂರ್ಯ ದೂರಿದರು.
ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮಾತನಾಡಿ, ನಾರೀಶಕ್ತಿ ವಂದನ ಅಧಿನಿಯಮ ಮಸೂದೆಯನ್ನು ಕೇಂದ್ರ ಸರ್ಕಾರ ದೊಡ್ಡ ಕನಸು ಇಟ್ಟುಕೊಂಡು ಜಾರಿ ಮಾಡಲು ಮುಂದಾಗಿತ್ತು. ಆದರೆ ಕಾಂಗ್ರೆಸ್ ವಿರೋಧಿಸಿ ಮಹಿಳೆಯರಿಗೆ ಅನ್ಯಾಯ ಮಾಡಿದೆ. ನಾರೀಶಕ್ತಿಗೆ ಜೀವ ತುಂಬಬೇಕು ಎಂದು ಮೀಸಲು ಮಸೂದೆಯನ್ನು ಮೋದಿ ಅವರು ತಂದಿದ್ದರು. ಆದರೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸೇರಿ ಇತಿಶ್ರೀ ಹಾಡಿವೆ. ನಾರಿ ನೇತೃತ್ವದಲ್ಲಿ ಸರ್ಕಾರ ಮಾಡಿ, ಆಡಳಿತ ಮಾಡಬೇಕು ಎಂದು ಬಯಸಿದ್ದೆವು. ಹಲವಾರು ವರ್ಷದ ಹೋರಾಟದ ನಂತರ ಐತಿಹಾಸಿಕ ನಿರ್ಣಯ ಕೈಗೊಳ್ಳಲು ಅವಕಾಶ ಇತ್ತು. ಆದರೆ ಕಾಂಗ್ರೆಸ್ ಕುತಂತ್ರದಿಂದ ಸಾಧ್ಯವಾಗಲಿಲ್ಲ. ವೇದಿಕೆ ಮೇಲೆ ಕಾಂಗ್ರೆಸ್ ನವರು ಮಾತನಾಡುವುದು ಒಂದು, ಕಾರ್ಯರೂಪದಲ್ಲಿ ಇನ್ನೊಂದು ಎಂದರು.
ಮಹಿಳಾ ಸಬಲೀಕರಣ ಬಸ್ ಫ್ರೀ ಬಿಟ್ಟಿದ್ದೇವೆ, ಹಣ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಮಹಿಳೆ ಜೊತೆಗೆ ಅಧಿಕಾರ ಹಂಚಿಕೊಳ್ಳಿ ಎಂದರೆ ಹಿಂದೇಟು ಹಾಕುತ್ತಾರೆ. ಕಾಂಗ್ರೆಸ್‍ನ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಕಾಂಗ್ರೆಸ್ ಮಹಿಳಾ ವಿರೋಧಿ, ರೈತ ವಿರೋಧಿ, ದಲಿತರ ವಿರೋಧಿ ಎಂದು ಸಾಬೀತು ಮಾಡಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ತರುವ ಸಂಕಲ್ಪ ಮಾಡೋಣ. ಕಾಂಗ್ರೆಸ್ ಧೋರಣೆ ಖಂಡಿಸಿ ಮುಂದೆ ದೊಡ್ಡ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆಗುತ್ತದೆ ಎಂಬ ಸಂಭ್ರಮದಲ್ಲಿ ಇದ್ದೆವು. ಆದರೆ ಇಡೀ ದೇಶದ ತಾಯಂದಿರ ದುರಾದೃಷ್ಟ ಕಾಂಗ್ರೆಸ್ ಮಸೂದೆಗೆ ವಿರೋಧ ಮಾಡಿ ಅವಮಾನ ಮಾಡಿದೆ. ಮಹಿಳೆಯರ ಆಸೆಗೆ ತಣ್ಣೀರು ಎರಚುವ ಕೆಲಸವನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಮಾಡಿವೆ. ಸಮಾನತೆಯನ್ನು ಕಾಪಾಡಬೇಕು ಎಂದು ಮೋದಿ ಅವರು ಈ ಮಸೂದೆ ತಂದರು. ಅದರೆ ಇದಕ್ಕೆ ಬೆಂಬಲ ಸಿಗಲಿಲ್ಲ. ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು. ಈಗ ಹೋರಾಟ ಅನಿವಾರ್ಯ ಎಂದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ ಮಂಜುಳ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷೆ (ಮಹಿಳಾ ಮೋರ್ಚಾ) ಶ್ವೇತಾ ರಾಘವೇಂದ್ರ ಮತ್ತಿತರರು ಇದ್ದರು.














