ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಬದ್ಧ: ಈಶ್ವರ್ ಖಂಡ್ರೆ

WhatsApp
Telegram
Facebook
Twitter
LinkedIn

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವ ಹಾಗೂ ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲಿದ್ದು, ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಂಪುಟಕ್ಕೆ ಸೇರ್ಪಡೆಯಾಗಿರುವ ಕಾಂಗ್ರೆಸ್ ಮುಖಂಡ ಈಶ್ವರ್ ಬಿ ಖಂಡ್ರೆ ತಿಳಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಬುಧವಾರ ರಾತ್ರಿ ಬಾಲಬ್ರೂಹಿ ಅತಿಥಿ ಗೃಹದ ಪಕ್ಕದಲ್ಲಿರುವ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನ ತಮ್ಮ ಸರ್ಕಾರಿ ನಿವಾಸದಲ್ಲಿ ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು, ಬೀದರ್ ಜಿಲ್ಲೆಯಿಂದ ಬಂದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ನನ್ನ ಮೇಲೆ ಮತ್ತೊಮ್ಮೆ ವಿಶ್ವಾಸವಿಟ್ಟು ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ವರಿಷ್ಠರಾದ ಸೋನಿಯಾಗಾಂಧಿ ಮತ್ತು ರಾಜ್ಯ ಉಸ್ತುವಾರಿಗಳಾದ ರಣದೀಪ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿಡಬ್ಲ್ಯುಸಿ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪಕ್ಷದ ವರಿಷ್ಠರ ವಿಶ್ವಸಕ್ಕೆ ಚ್ಯುತಿಯಾಗದಂತೆ ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕದ ಅದರಲ್ಲೂ ಬೀದರ್ ಜಿಲ್ಲೆಯ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ. ಇನ್ನು ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಹೋರಾಟದ ನೇತಾರರು, ನಿಜಾಮರು ಮತ್ತು ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಡಿದ ಲೋಕನಾಯಕ ಶತಾಯುಷಿ ಮಾಜಿ ಸಚಿವ ನನ್ನ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ರಾಜಕೀಯ ಜೀವನದ ರೋಲ್ ಮಾಡಲ್ ಆಗಿದ್ದಾರೆ ಎಂದು ಹೇಳಿದರು.

ತಂದೆಯಿಂದ ಪ್ರೇರಣೆ ಪಡೆದು, ಸಾರ್ವಜನಿಕರೊಂದಿಗೆ ಬೆರೆತು, ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಾ ಹುಟ್ಟೂರು ಭಾಲ್ಕಿಯ ಮತ್ತು ಜಿಲ್ಲೆ ಬೀದರ್ ನ ಸರ್ವಾಂಗೀಣ ಪ್ರಗತಿಗಾಗಿ ಸದಾ ಶ್ರಮಿಸಿದ್ದೇನೆ. ಕ್ಷೇತ್ರದ ಮತ್ತು ಜಿಲ್ಲೆಯ ಜನತೆಗೆ ಹಿತಕ್ಕಾಗಿ ಮನಸ್ಸು ಸದಾ ತುಡಿಯುತ್ತದೆ. ಒಟ್ಟು ಪರಿಶ್ರಮದ ಫಲವಾಗಿ ಭಾಲ್ಕಿಯ ಜನತೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿ ನನ್ನನ್ನು ವಿಧಾನಸೌಧಕ್ಕೆ ಕಳಿಸಿದ್ದಾರೆ. ಇದು ಬೀದರ್ ಜನತೆಗೆ ನನ್ನ ಬಗ್ಗೆ ಇರುವ ಪ್ರೀತಿ ವಿಶ್ವಾಸದ ಧ್ಯೋತಕವಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ತೋರಿದ ಸಂಪೂರ್ಣ ನಿಷ್ಠೆ, ಶಾಸಕನಾಗಿ ಕ್ಷೇತ್ರದ ಬಗ್ಗೆ ಇಟ್ಟಿರುವ ಕಾಳಜಿ ಮತ್ತು ಪಕ್ಷದ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ 2017ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಸ್ಥಾನವನ್ನು ನೀಡಲಾಯಿತು. ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಏಕೈಕ ಕಾರ್ಯಾಧ್ಯಕ್ಷನಾಗಿ ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಸಂಘಟಿಸುವ ಸೌಭಾಗ್ಯ ಕೂಡ ದೊರೆತಿದ್ದು ಅವಿಸ್ಮರಣೀಯವಾಗಿದೆ ಎಂದು ಹೇಳಿದರು.

2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಪುನರಾಯ್ಕೆಯಾದ ನನಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಸ್ಥಾನ ದೊರೆಯಿತು. ಈವರೆಗೆ ಯಾವುದೇ ಅರಣ್ಯ ಸಚಿವರು ತೋರದ ಧೈರ್ಯ ಪ್ರದರ್ಶಿಸಿ 12 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿದ್ದೇನೆ. ಹೊಸದಾಗಿ 15 ಸಾವಿರ ಎಕರೆ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿದ್ದೇನೆ. ನನ್ನ ಅವಧಿಯಲ್ಲಿ ಅರಣ್ಯ ಇಲಾಖೆ ವತಿಯಿಂದ 11 ಕೋಟಿ ಸಸಿ ನೆಟ್ಟು ಪೋಷಣೆ ಮಾಡುವ ಗುರಿಯನ್ನು ಪೂರೈಸಲಾಗಿದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon