ಬೆಂಗಳೂರು: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘ ಮತ್ತು ವಿಜಯಾನಂದ್ ಎಸ್.ಕಾಶಪ್ಪನವರ್ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ನೂತನ ಸಚಿವ ಸಂಪುಟದಲ್ಲಿ ಪಂಚಮಸಾಲಿ ಲಿಂಗಾಯಿತ ಸಮಾಜದ ನೇರ ನುಡಿಯ, ಯುವ ನಾಯಕ, ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ರಿಗೆ ಸಚಿವ ಸ್ಥಾನವನ್ನು ನೀಡುವಂತೆ ಆಗ್ರಹಿಸಲಾಯಿತು.
ಸೋಮವಾರ ಈ ಕುರಿತು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಡಿಂಡೂರ ಮಾತನಾಡಿ, ಲಿಂಗಾಯಿತ ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ 1 ಕೋಟಿ ಅಷ್ಟು ಜನಸಂಖ್ಯೆ ಹೊಂದಿದೆ. ನಮ್ಮ ಸಮಾಜ ಕೃಷಿ ಪ್ರಧಾನವಾಗಿದೆ. ಕಿತ್ತೂರು ಚೆನ್ನಮ್ಮ ಆದರ್ಶ ಪಾಲಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಣಕ್ಯ ರಾಜಕಾರಣಿ. ಲಿಂಗಾಯಿತ ಪಂಚಾಮಸಾಲಿ ಸಮುದಾಯಕ್ಕೆ ಯಾವ ಸರ್ಕಾರವು ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿಲ್ಲ ಎಂಬ ಬೇಸರವಿದೆ. ಈಗಲಾದರೂ ಅವರು ಉಪಮುಖ್ಯಮಂತ್ರಿ ಮತ್ತು ಎರಡು ಸಚಿವ ಸ್ಥಾನವನ್ನು ನಮ್ಮ ಸಮಾಜಕ್ಕಾಗಿ ನೀಡಬೇಕು. ಮುಖ್ಯವಾಗಿ ವಿಜಯಾನಂದ್ ಕಾಶಪ್ಪನವರ್ ಅವರ ತಂದೆ, ತಾಯಿ ಶಾಸಕರಾಗಿದ್ದರು ಮತ್ತು ಅವರ ಪತ್ನಿ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಪಕ್ಷದಲ್ಲಿ 40ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬಿ.ಆರ್.ಪಾಟೀಲ್, ಹುಕ್ಕೇರಿ, ಎಂ.ವೈ ಪಾಟೀಲ್ ಸೇರಿದಂತೆ ನಮ್ಮ ಸಮಾಜದ ಆನೇಕ ಶಾಸಕರುಗಳು ಇದ್ದಾರೆ. ಯುವಕರು, ಹೊಸತನ ಕೊಡಬೇಕು ಎನ್ನುವ ನಿಟ್ಟಿನಲ್ಲಿ ವಿಜಯಾನಂದ್ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಕೊಡಬೇಕಿದೆ. ಇದರಿಂದ ಸಮಾಜದ ಅಭಿವೃದ್ದಿಯ ಜೊತೆಯಲ್ಲಿ ನಮ್ಮ ಸಮುದಾಯವು ಅಭಿವೃದ್ಧಿಯಾಗುತ್ತದೆ. ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ, ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸಲಾಗಿದೆ, ಉತ್ತಮ ಸ್ಪಂದನೆ ಸಿಕ್ಕಿದೆ, ಇನ್ನು ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಹಳ್ಳಿ, ಪ್ರಧಾನ ಕಾರ್ಯದರ್ಶಿ ಉಮಾಪತಿ, ವೀರಶೈವ ಸಮಾಜದ ಮುಖಂಡರುಗಳಾದ ಶಿವಕುಮಾರ್ ಬೆಳಗಾಂ, ವೀರೇಶ್, ಎಂ.ಸಿದ್ದೇಶ್ ಬೇಗೂರು ಹೆಚ್.ಎನ್.ತಿಪ್ಪೇಸ್ವಾಮಿ, ಧರ್ಮದರ್ಶಿ ಪಿ.ಡಿ.ಶಿರೂರ್ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.














