ಬೆಂಗಳೂರು: 52ದಿನಗಳಲ್ಲಿ ಅಟ್ಲಾಂಟಿಕ್ ಸಮುದ್ರದ ಮೂರು ಸಾವಿರ ಕಿಲೋಮೀಟರ್ ಕ್ರಮಿಸಿದ ಅಪರೂಪದ ದಾಖಲೆ ನಿರ್ಮಿಸಿರುವ ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು ಕುಮಾರಿ ಅನನ್ಯ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭವನ್ನು ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮುಖ್ಯ ಆಯುಕ್ತರಾದ ಡಾ.ಪಿ.ಜಿ.ಆರ್.ಸಿಂದ್ಯಾ, ಸಹಾಯಕ ಆಯುಕ್ತ ಮೋಹನ್ ಕುಮಾರ್ ಕೊಂಡಜ್ಜಿ, ದೂರದರ್ಶನದ ನಿವೃತ್ತ ಸಹಾಯಕ ನಿರ್ದೇಶಕಿ ಡಾ.ನಿರ್ಮಲಾ ಸಿ.ಯಲಿಗಾರ್, ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಅನನ್ಯ ಪ್ರಸಾದ್ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪಿಜಿಆರ್ ಸಿಂದ್ಯಾ ಮಾತನಾಡಿ, ಅನನ್ಯ ಪ್ರಸಾದ್ ಅವರು ಕೇವಲ 52 ದಿನಗಳಲ್ಲಿ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಭಾರತಕ್ಕೆ ಕೀರ್ತಿ ತಂದಿದ್ದಾರೆ ಇಂತಹವರನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ಶ್ಲಾಘನೀಯ, ವಿಶೇಷವಾಗಿ ರಾಷ್ಟಕವಿ ಶಿವರುದ್ರಪ್ಪ ಅವರ ಮೊಮ್ಮಗಳಾಗಿ ಇಂತಹ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು.
ನಿರ್ಮಲಾ ಸಿ.ಯಲಿಗಾರ್ ಮಾತನಾಡಿ, ಜಿ.ಎಸ್.ಶಿವರುದ್ರಪ್ಪ ನವರ ಸಾಹಿತ್ಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸಾಹಿತ್ಯವಾಗಿದೆ. ಅವರ ಕುಡಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ, ಜಿ.ಎಸ್.ಶಿವರುದ್ರಪ್ಪ ಅವರ ದೃಷ್ಟಿಯಲ್ಲಿ ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂಬಂತೆ ಸಾಗರವನ್ನು ದಾಟುವ ಮೂಲಕ ಪ್ರೇರಣದಾಯಕ ಸಾಧನೆಯಾಗಿದೆ, ಮೂರು ಸಾವಿರ ಮೈಲಿಗಳಷ್ಟು ಕ್ರಮಿಸಿರುವುದು ಅಪರೂಪದ ಸಾಧನೆಯಾಗಿದೆ ಎಂದರು.
ಮುಕ್ತಾ ಬಿ. ಕಾಗಿಲೆ, ಡಾ.ಶಿವಪ್ರಸಾದ್, ಪೂರ್ಣಿಮಾ ಪ್ರಸಾದ್, ಜಯಂತಿ ಮರುಳಸಿದ್ಧಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














