ಲಾಲ್‌ಬಾಗ್ ಸಸ್ಯತೋಟದಲ್ಲಿ ರಾಜ್ಯಮಟ್ಟದ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಮಾವು ಮತ್ತು ಹಲಸು ಮೇಳ-2026 ಕ್ಕೆ ಲಾಲ್‌ಬಾಗ್ ಸಸ್ಯತೋಟದಲ್ಲಿ ಗುರುವಾರ ಅಧಿಕೃತ ಚಾಲನೆ ಸಿಕ್ಕಿದೆ.

ಶಾಸಕ ಉದಯ್ ಬಿ. ಗರುಡಾಚಾರ್ ಮೇಳಕ್ಕೆ ಚಾಲನೆ ನೀಡಿದರು. ನಮ್ಮ ರೈತರ ಪರಿಶ್ರಮದ ಪ್ರತಿಲವಾಗಿರುವ ಈ ಸ್ವದೇಶಿ ಹಣ್ಣುಗಳನ್ನು ಖರೀದಿಸುವ ಮೂಲಕ ರೈತ ಸಮುದಾಯಕ್ಕೆ ಬೆಂಬಲ ನೀಡೋಣ ಎಂದು ಕರೆ ನೀಡಿದರು.ಇಂದಿನಿಂದ ಜೂ. 30ರವರೆಗೆ ಒಟ್ಟು 27 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ನೇರವಾಗಿ ಗ್ರಾಹಕರಿಗೆ ಮಾವು ಮತ್ತು ಹಲಸಿನ ವಿವಿಧ ತಳಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಮೇಳದ ಕುರಿತು ಮಾಹಿತಿ ನೀಡಿದ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದು ಗಂಗಾಧರ್, ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಹಾಗೂ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ಸಹಜವಾಗಿ ಮಾಗಿದ ಹಣ್ಣುಗಳನ್ನು ಒದಗಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಳೆದ ಮೇ 8ರಿಂದ 17ರವರೆಗೆ ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಮಾವು ಮತ್ತು ಹಲಸು ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಆ ಮೇಳದಲ್ಲಿ ರೈತರು ಸುಮಾರು 53 ರಿಂದ 57 ಟನ್‌ಗಳಷ್ಟು ಮಾವು ಹಾಗೂ 1.5 ಟನ್‌ಗಳಷ್ಟು ಹಲಸನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿದ್ದರು. ಅದರ ಯಶಸ್ಸಿನ ಮುಂದುವರಿದ ಭಾಗವಾಗಿ ಇದೀಗ ಲಾಲ್‌ಬಾಗ್‌ನಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತಗೊಂಡಿದೆ. ಹೂ ಬಿಡುವ ಪ್ರಕ್ರಿಯೆ ವಿಳಂಬವಾದ ಕಾರಣ ವಿವಿಧ ಪ್ರದೇಶಗಳಲ್ಲಿ ಮಾವು ಹಲವು ಹಂತಗಳಲ್ಲಿ ಕೊಯ್ಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ಮಾತನಾಡಿ, ಮೇಳದಲ್ಲಿ ಸುಮಾರು 65 ಕ್ಕೂ ಹೆಚ್ಚು ಮಾವಿನ ತಳಿಗಳು ಹಾಗೂ 15 ಕ್ಕೂ ಹೆಚ್ಚು ಹಲಸಿನ ತಳಿಗಳು ಪ್ರದರ್ಶನಕ್ಕಿಡಲಾಗಿದೆ. ಬಾದಾಮಿ, ರಸಪುರಿ, ಮಲ್ಲಿಕಾ, ಸೆಂದೂರ, ಹಿಮಾಂಪಸಂದ್, ಕೇಸರ್, ದಶೇರಿ, ಬನೇಶಾನ್, ಹಿಮಾಯತ್, ತೋತಾಪುರಿ, ರತ್ನಗಿರಿ ಆಲ್ಫಾನ್ಸೊ, ನೀಲಂ, ಅಮ್ರಪಾಲಿ ಸೇರಿದಂತೆ 18 ರಿಂದ 20 ಪ್ರಮುಖ ಮಾವಿನ ತಳಿಗಳು ಮಾರಾಟಕ್ಕೆ ಲಭ್ಯವಿವೆ. ಜತೆಗೆ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತುಬಗೆರೆ, ಲಾಲ್‌ಬಾಗ್ ಮಧುರ್, ಸೂರ್ಯ ಹಾಗೂ ಚಂದ್ರ ಸೇರಿದಂತೆ 7 ಹಲಸಿನ ತಳಿಗಳೂ ಗ್ರಾಹಕರಿಗೆ ದೊರೆಯಲಿವೆ ಎಂದು ವಿವರಿಸಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ, ಕೊಪ್ಪಳ, ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಜಿಲ್ಲೆಗಳ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಮೇಳದಲ್ಲಿ ಒಟ್ಟು 168 ಮಾವು ಬೆಳೆಗಾರರ ಮಳಿಗೆಗಳು ಹಾಗೂ 17 ಹಲಸು ಬೆಳೆಗಾರರ ಮಳಿಗೆಗಳನ್ನು ತೆರೆಯಲಾಗಿದೆ ಹಾಗೂ ಹಣ್ಣುಗಳೊಂದಿಗೆ ಮಾವು ಮತ್ತು ಹಲಸಿನಿಂದ ತಯಾರಿಸಲಾದ ಜ್ಯೂಸ್, ಜಾಮ್, ಉಪ್ಪಿನಕಾಯಿ, ಕ್ಯಾಂಡಿ, ಚಿಪ್ಸ್, ಪಲ್ಪ್, ಸ್ಕ್ವ್ಯಾಶ್ ಹಾಗೂ ಐಸ್‌ಕ್ರೀಂ ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳೂ ಮಾರಾಟಕ್ಕೆ ಲಭ್ಯವಿವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ  ಟಿ.ಆರ್. ವೇದಮೂರ್ತಿ ಹೇಳಿದರು.

ಈ ವೇಳೆ ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ.ಜಗದೀಶ್, ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon