ಬೆಂಗಳೂರು: ಮಂಗಳವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ್ ಮತಕ್ಷೇತ್ರದ ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹುನಗುಂದ್ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ನೂತನ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಾಧ್ಯಮಗೋಷ್ಠಿ ಏರ್ಪಡಿಸಲಾಗಿತ್ತು.
ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಿಶ್ವನಾಥ ಪಾಟೀಲ್, ಮಲ್ಲಣ್ಣ ಎಲೆಗಾರ, ಅಮರೇಶ್ ನಾಗೂರ್, ಮುತ್ತಣ್ಣ ಕಲಗುಡಿ, ಮಹಾಂತೇಶ್ ನರಗುಂದ, ರವಿ ಹುಚ್ಚನೂರು, ಶಾಂತಣ್ಣರಾಘವೇಂದ್ರ ಧಾರವಾಡ, ಮೌನೇಶ್ ಬಂಡಿವಡ್ಡರ್, ನೀಲಪ್ಪ ಅಸೋಲಿ, ವಿಠ್ಠಲ್ ಜಕ್ಕ, ಸಿದ್ದ ಭಧ್ರಶೆಟ್ಟಿ, ಮನು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಅಬ್ದುಲ್ ರಜಾಕ್ ತಟಗಾರರವರು ಮಾತನಾಡಿ, ವಿಜಯಾನಂದ್ ಎಸ್.ಕಾಶಪ್ಪನವರ್ ಅವರ ಕುಟುಂಬ ಕಳೆದ 50 ವರ್ಷಗಳಿಂದ ಮನೆತನ ನಿಷ್ಠೆಯಿಂದ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕುಟುಂಬ ಎಂಬ ಕೀರ್ತಿ, ಹೆಗ್ಗಳಿಕೆ ಪಡೆದಿದೆ. ಯುವ ನಾಯಕ, ಕ್ರಿಯಾಶೀಲರಾಗಿರುವ ಮತ್ತು ಕಾಂಗ್ರೆಸ್ ಪಕ್ಷ ಉತ್ತಮ ಸಂಘಟಕರಾಗಿರುವ ಶಾಸಕ ವಿಜಯಾನಂದ್ ಕಾಶಪ್ಪನವರ್ ರವರನ್ನು ನೂತನ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕೃಷ್ಣ ನದೀ ನೀರು ಯೋಜನೆ ಜಾರಿಗೆ ತಂದಿದ್ದು , 60 ಸಾವಿರ ಎಕರೆ ಇಸ್ರೇಲ್ ಮಾದರಿ ನೀರಾವರಿ ಯೋಜನೆ, ಶಿಕ್ಷಣಕ್ಕೆ ಒತ್ತು ಮತ್ತು ಸ್ಮಾರ್ಟ್ ಕ್ಲಾಸ್ ಬೋರ್ಡ್ ಒದಗಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದ್ದಾರೆ. ಹುನಗಂದ್-ಇಲಕಲ್ ಅವಳಿ ನಗರದಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣ, ಸಮುದಾಯ ಭವನ ಹಾಗೂ ರಸ್ತೆಗಳ ಅಭಿವೃದ್ಧಿ, ಮರೋಳ್ ನಲ್ಲಿ ಏತಾ ನೀರಾವರಿ, ನಂದವಡಗಿ ಏತ ನೀರಾವರಿ, ಹನಿ ನೀರಾವರಿಗೆ ಒತ್ತು ನೀಡಿ ರೈತರ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ತಾಲೂಕುನಲ್ಲಿ ಕ್ರೀಡೆಗಳಿಗೆ ಒತ್ತು ನೀಡಿ ಒಳಾಂಗಣ, ಹೊರಂಗಣ ಮತ್ತು ಈಜುಕೊಳ ನಿರ್ಮಾಣ ಮಾಡಿದ್ದಾರೆ. 2339 ನಿವೇಶನಗಳನ್ನು ವಸತಿ ರಹಿತರಿಗೆ ಹಕ್ಕು ಪತ್ರ ನೀಡಿದ್ದಾರೆ. ಇನ್ನು ನಮ್ಮ ಕ್ಷೇತ್ರದಲ್ಲಿ 60 ಕ್ಕೂ ಹೆಚ್ಚು ಜಾತಿ ಸಮುದಾಯದವರು ಇದ್ದಾರೆ ಎಲ್ಲರನ್ನ ಸಹೋದರತ್ವದಲ್ಲಿ ಬಾಳುತ್ತಿದ್ದೇವೆ ಎಂದರೆ ಅವರೆ ಕಾರಣ. ಶಾಸಕರಾಗಿ ವಿಜಯಾನಂದ್ ಎಸ್.ಕಾಶಪ್ಪನವರ್ ಯುವ ಕಾಂಗ್ರೆಸ್ , ಜಿಲ್ಲಾ ಕಾಂಗ್ರೆಸ್, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿ ಉತ್ತಮ ಸಂಘಟಕರಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ಸೋನಿಯಗಾಂಧಿ, ರಾಹುಲ್ ಗಾಂಧಿ, ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್ ರವರಲ್ಲಿ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ. ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಜನಪ್ರಿಯ ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ರವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು.
ಅವರನ್ನು ಸಚಿವರನ್ನಾಗಿ ಮಾಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯವಾಗುತ್ತದೆ. ನಿಷ್ಟಾವಂತ ಕಾರ್ಯಕರ್ತ, ಶಾಸಕರಾದ ವಿಜಯಾನಂದ್ ಕಾಶಪ್ಪನವರ್ ರವರಿಗೆ ಮಂತ್ರಿ ಸ್ಥಾನ ಕೊಡದೇ ಹೋದರೆ ಹುನಗುಂದ ಮತಕ್ಷೇತ್ರ ಎಲ್ಲ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳು ರಾಜೀನಾಮೆ ನೀಡುತ್ತೇವೆ ಎಂದು ಹೇಳಿದರು.














