ಬೆಂಗಳೂರು: ವಿಜ್ಞಾನವನ್ನು ಸರಳ ಕನ್ನಡದಲ್ಲಿ ತಲುಪಿಸುವ ಕೆಲಸವಾಗಬೇಕಿದೆ. ಈ ಕುರಿತು ಸರಳಗನ್ನಡದಲ್ಲಿ ವಿಜ್ಞಾನದ ವಿಚಾರಗಳನ್ನು ತಲುಪಿಸುವ ಕೆಲಸಕ್ಕೆ ಯುವ ಜನರು ಪ್ರಯಾಣಿಸಬೇಕು ಎಂದು ವಿಮರ್ಶಕ ಪ್ರೊ. ಎಚ್. ಎಸ್. ರಾಘವೇಂದ್ರ ರಾವ್ ತಿಳಿಸಿದರು.
ಮಂಗಳವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಎರಡನೇ ಮತ್ತು ಮೂರನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಯುವ ಜನರು ವಿಜ್ಞಾನವನ್ನು ಇಂಗ್ಲೀಷನ್ ನಲ್ಲಿಯೇ ಕಲಿತರೂ ಕನ್ನಡಿಗರಿಗಾಗಿ ವಿಜ್ಞಾನವನ್ನು ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೆಲವು ವಿದ್ಯಾರ್ಥಿಗಳು ಪ್ರಯತ್ನ ಪಟ್ಟರೂ ಸಹ ಉತ್ತಮ ಪರಿಣಾಮ ಬೀರಲಿದೆ. ಕನ್ನಡದಲ್ಲಿ ವಿಜ್ಞಾನವನ್ನು ತಲುಪಿಸಿದರೆ ಎಲ್ಲರಿಗೂ ಅರ್ಥವಾಗುವ ಜತೆಗೆ ಅಳವಡಿಸಿಕೊಳ್ಳಲು ಸಹಾಯವಾಗಲಿದೆ ಎಂದರು.
ವಿಜ್ಞಾನವನ್ನು ಇಲ್ಲಿಯವರೆಗೂ ಪಾಶ್ಚಾತ್ಯ ನೆಲೆಗಟ್ಟಿನಲ್ಲಿಯೇ ನೋಡಲಾಗಿದೆ. ಆದ್ದರಿಂದ ವಿಜ್ಞಾನ ಮತ್ತು ಭಾರತೀಯ ಪರಂಪರೆಯ ಅಮೂರ್ತ ಚಿಂತನೆಯಾಗಬೇಕಿದೆ. ಇಂದು ಮೂಲ ವಿಜ್ಞಾನ, ಭೌತ ವಿಜ್ಞಾನವನ್ನು ಬಿಟ್ಟು ಎಲ್ಲರೂ ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ. ಆದರೆ ವಿಜ್ಞಾವಿಲ್ಲದೆ, ತಂತ್ರಜ್ಞಾನವಿಲ್ಲ, ತಂತ್ರಜ್ಞಾನದ ಮೂಲ ಬೇರು ವಿಜ್ಞಾನ ಎಂಬುದನ್ನು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿಜ್ಞಾನವನ್ನು ಪ್ರಗತಿಗಿಂತ ವಿನಾಶಕ್ಕೇ ಹೆಚ್ಚು ಬಳಸಲಾಗುತ್ತಿದೆ. ಅದರಲ್ಲಿಯು ಮುಂದುವರಿದ ದೇಶಗಳು ಹೆಚ್ಚು ವಿನಾಶಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಡ್ರೋನ್ ಮೂಲಕ ಎಲ್ಲೆಂದರಲ್ಲಿ ಬಾಂಬ್ ಹಾಕುವುದಕ್ಕಾಗಿಯೇ ವಿಜ್ಞಾನದ ಸಂಶೋಧನೆಗಳು ನಡೆದದ್ದು, ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಹಾಗೆಯೇ ವಿಜ್ಞಾನ ಮತ್ತು ಧರ್ಮದ ನಡುವೆ ವಿರೋಧವಿದೆ. ಏಕೆಂದರೆ, ವಿಜ್ಞಾನವು ಎಲ್ಲಿಯೂ ಯಾವುದನ್ನೂ ಅಂತಿಮವೆಂದು ಹೇಳುವುದಿಲ್ಲ. ಸಂಶೋಧನೆ ನಡೆದಂತೆಲ್ಲಾ ಹೊಸತನ ಬರುತ್ತದೆ. ವಿಜ್ಞಾನ ಎಂದರೆ ಈಗ ಇರುವ ಸತ್ಯವಷ್ಟೆ. ನಮಗೆ ಎಲ್ಲ ಗೊತ್ತಿದೆ ಎಂದು ಅಂದು ಕೊಂಡರೆ ನಾವು ವಿಜ್ಞಾನದಲ್ಲಿ ಮುಂದವರಿಯಲು ಸಾಧ್ಯವಿಲ್ಲ ಎಂದು ಪ್ರೊ. ಎಚ್. ಎಸ್. ರಾಘವೇಂದ್ರ ರಾವ್ ತಿಳಿಸಿದರು.
ನಮ್ಮ ವಿದ್ಯಾರ್ಥಿಗಳು ಉತ್ತಮ ಸ್ಥಾನ ಮತ್ತು ಶ್ರೇಯಸ್ಸು ಪಡೆಯುಬೇಕು ಎಂಬುದನ್ನು ಮಾತ್ರ ಶಿಕ್ಷಕ, ಉಪನ್ಯಾಸಕ ಬಯಸುತ್ತಾನೆ. ಅವನಿಗೆ ವಿದ್ಯಾರ್ಥಿಗಳಿಂದ ಬೇರೆ ನಿರೀಕ್ಷೆ ಇರುವುದಿಲ್ಲ. ಸಾಧಕ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್‌ಗಳು. ಜೀವನದಲ್ಲಿ ಯಶಸ್ಸು ಗಳಿಸಲು ಜ್ಞಾನದ ಜತೆಗೆ ನಿರಂತರ ಶ್ರಮ ಮುಖ್ಯ ಎಂದು ನೃಪತುಂಗ ವಿವಿ ಕುಲಪತಿ ಪ್ರೊ. ಬಿ. ಕೆ. ಮೋಹನ್ ಕುಮಾರ್ ಅಭಿಪ್ರಾಯಿಸಿದರು.
ಘಟಿಕೋತ್ಸವ ಸಮಾರಂಭದಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಅದಾ ಫಾತಿಮಾ, ಕುಲಸಚಿವರು (ಮೌಲ್ಯಮಾಪನ) ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಯಮಾಲ ಸೇರಿ 6 ಮಂದಿಗೆ ಗೌರವ ಡಾಕ್ಟರೆಟ್:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ರಾಮಚಂದ್ರ, ಹಿರಿಯ ಸಾಹಿತಿ ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಜಲಸಂಪನ್ಮೂಲ ನಿರ್ವಹಣಾ ತಜ್ಞ ಡಾ. ಕೆ. ಜೈಪ್ರಕಾಶ್, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಮತ್ತು ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಬಿ.ಎಚ್. ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
18 ಮಂದಿಗೆ ಚಿನ್ನದ ಪದಕ:
18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 1,084 ಸ್ನಾತಕ ಮತ್ತು 258 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.














