ಬಸವ ಜಯಂತಿ ಆಚರಣೆಯ ವೇಳೆ ಜನ ಸಾಮಾನ್ಯರನ್ನು ನಿರ್ಭಂದಿಸಿದ್ದು ಸರಿಯಲ್ಲ: ಎಸ್. ಸಂಗಮೇಶ್

WhatsApp
Telegram
Facebook
Twitter
LinkedIn

ಬೆಂಗಳೂರು: ವಿಶ್ವಗುರು ಬಸವಣ್ಣನವರ ಬಸವ ಜಯಂತಿ ಆಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಬಸವ ಜಯಂತಿಯಲ್ಲಿ ತಾರತಮ್ಯ ಧೋರಣೆ ಖಂಡನೀಯ ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಆರೋಪಿಸಿದರು.

ಸೋಮವಾರ ಚಾಲುಕ್ಯ ವೃತ್ತ ಹಾಗೂ ವಿಧಾನಸೌಧದ ಮುಂಭಾಗ ಬಸವೇಶ್ವರರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕಾಗಿತ್ತು. ಆದರೆ ವಿಧಾನ ಸೌಧ ಮುಂಭಾಗ ಹಾಗೂ ಚಾಲುಕ್ಯ ವೃತ್ತದಲ್ಲಿ ಮಧ್ಯಾಹ್ನ 11:30ರೊಳಗೆ ಗೇಟ್‌ಗಳನ್ನು ಮುಚ್ಚಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದು ಅತ್ಯಂತ ವಿಷಾದನೀಯ ಹಾಗೂ ಖಂಡನೀಯ ಎಂದರು.

ಬಸವ ಜಯಂತಿ ಎಂದರೆ ಕೇವಲ ಒಂದು ಆಚರಣೆ ಅಲ್ಲ. ಅದು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ನೆನಪಿಸುವ ಪವಿತ್ರ ದಿನ. 12ನೇ ಶತಮಾನದಲ್ಲೇ ಮಹಾನ್ ಸಮಾಜ ಪರಿವರ್ತಕರಾದ ಬಸವಣ್ಣ ಅವರು ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿ, ಸಮಾನತೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ. ಸರ್ಕಾರ ಬಸವೇಶ್ವರರ ಚಿಂತನೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಬಸವಣ್ಣರ ತತ್ವಗಳನ್ನು ಸಾರಬೇಕಾದ ದಿನವೇ ಜನರನ್ನು ದೂರವಿಡುವುದು ಸರಿಯಲ್ಲ. ಭದ್ರತೆ ನೆಪದಲ್ಲಿ ಜನರ ಭಾವನೆಗಳನ್ನು ಹತ್ತಿಕ್ಕುವುದನ್ನು ಒಪ್ಪಲು ಸಾಧ್ಯವಿಲ್ಲ. ಜನರಿಗಾಗಿ ಇರುವ ಆಚರಣೆಯಲ್ಲಿ ಜನರನ್ನೇ ದೂರವಿಡುವುದು ಅರ್ಥವಿಲ್ಲದ ಕ್ರಮ ಎಂದರು.

ಕಾರ್ಯಕ್ರಮ ಸ್ಥಳದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಕುಡಿಯುವ ನೀರು, ಆಸನಗಳ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಅತೀ ಚಿಕ್ಕದಾದ ಟೆಂಟ್ ಹಾಕಲಾಗಿದ್ದು, ಇದರಿಂದ ಅಶಕ್ತರು, ಹಿರಿಯ ನಾಗರಿಕರು ತೊಂದರೆ ಎದುರಿಸುವಂತಾಯಿತು. ಇಂತಹ ನಿರ್ಲಕ್ಷ್ಯ ಮತ್ತು ಅಸಮರ್ಪಕ ವ್ಯವಸ್ಥೆಗಳು ಬಸವಣ್ಣರ ಆದರ್ಶಗಳಿಗೆ ವಿರುದ್ಧವಾಗಿದ್ದು, ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಿವೆ ಎಂದು ಎಸ್. ಸಂಗಮೇಶ್ ಹೇಳಿದರು.

ಇನ್ನು ಮುಂದೆ ಬಸವ ಜಯಂತಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವ ಮೂಲಕ ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಬೇಕು. ಬಸವಣ್ಣರ ವಚನಗಳು, ತತ್ವಗಳು ಮತ್ತು ವಿಚಾರಧಾರೆಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಬೇಕು. ನಿರ್ಬಂಧಾತ್ಮಕ ಕ್ರಮಗಳಿಗೆ ಇತಿಶ್ರೀ ಹಾಡಬೇಕು. ಬಸವ ಜಯಂತಿಯಂದು ನಾವು ಜಾತಿ ಭೇದವಿಲ್ಲದ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಅಂತರಜಾತಿ ವಿವಾಹಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ನಿಂಗರಾಜ್ ಗುಳೆ, ಮಲ್ಲಿಕಾರ್ಜುನ ಬಾಂಬೆಕರ್ ಹಾಗೂ ಪತ್ರಕರ್ತ ಅಗ್ನಿ ಅಜಿತ್ ಮತ್ತಿತರರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon