ಬೆಳಗಾವಿ: ವನ್ಯಜೀವಿಗಳು ಕಾಡಂಚಿನ ಪ್ರದೇಶಗಳಲ್ಲಿ ಕಂಡುಬರುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅರಣ್ಯ ಇಲಾಖೆಯ ಬೆಳಗಾವಿಯ ಖಾನಾಪೂರ ಉಪ ವಿಭಾಗದ ಲೋಂಡಾ ಪ್ರಾದೇಶಿಕ ವಲಯ ಕಚೇರಿ ಪ್ರಕಟಣೆಯನ್ನು ಹೊರಡಿಸಿದೆ.
ಸಾರ್ವಜನಿಕರು ಆನೆ ಹಾಗೂ ಇತರ ವನ್ಯಜೀವಿಗಳು ಕಂಡುಬಂದಲ್ಲಿ ಅರಣ್ಯ ಇಲಾಖೆಯ ಸಹಾಯವಾಣಿ ಕರೆ ಮಾಡಬೇಕು. ವಾಟ್ಸ್ಆಪ್ ಮೂಲಕ ವನ್ಯ ಸ್ಥಳದ ಲೋಕೇಷನ್ ಕೂಡ ಕಳುಸಹಿಸಬಹುದು. ಇನ್ನು ಕಾಣಿಸಿಕೊಂಡಿರುವ ಹಾಡಿ ಮತ್ತು ಹಳ್ಳಿಗಳಲ್ಲಿ ನಸುಕಿನ ಹಾಗೂ ಕತ್ತಲ ವೇಳೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು. ಉಳಿದಂತೆ ವಾಸದ ಮನೆಗಳು ಮತ್ತು ಜನನಿಬಿಡ ಪ್ರದೇಶಗಳ ಸುತ್ತಮುತ್ತ ಬೆಳೆದಿರುವ ಗಿಡಗಂಟೆಗಳು ಮತ್ತು ಪೊದೆಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದೆ.
ಸಂಜೆ 6 ಗಂಟೆಯ ನಂತರ ಸಾಕುಪ್ರಾಣಿಗಳನ್ನು ಮನೆಯೊಳಗೆ ಹಾಗೂ ದನ ಕರು ಜಾನುವಾರುಗಳನ್ನು ಕೊಟ್ಟಿಗೆಯ ಒಳಗ ಕಟ್ಟಹಾಕಬೇಕು. ರಾತ್ರಿ ವೇಳೆ ರೈತರು ಮತ್ತು ಸಾರ್ವಜನಿಕರು ಜಮೀನು ಕಾಯಲು ಅಥವಾ ಪ್ರಾಣಿಗಳನ್ನು ಓಡಿಸಲು ಹೋಗಬಾರದು, ಪ್ರಾಣಿಗಳನ್ನು ಕಂಡ ಕೂಡಲೆ ಸುರಕ್ಷಿತ ಸ್ಥಳಕ್ಕೆ ತೆರಳಿ ಇಲಾಖಾ ಸಿಬ್ಬಂದಿಗಳು ಬರುವವರೆಗೆ ಕಾದು ಅವರು ಬಂದ ಕೂಡಲೆ ನೆರವು ನೀಡಿ ಸಹಕರಿಸಬೇಕು. ಇಲಾಖೆಯ ಸಿಬ್ಬಂದಿಗಳು ಮತ್ತು ಸದಸ್ಯರುಗಳೊಂದಿಗೆ ಶಾಂತಿಯುತವಾಗಿ ಹಾಗೂ ಸಂಯಮದಿಂದ ವರ್ತಿಸಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದೆ.
ಹುಲಿ ಹಾಗೂ ಇತರೆ ವನ್ಯಜೀವಿಗಳು ಕಾಣಿಸಿಕೊಂಡಿರುವ ಹಳ್ಳಿಗಳಲ್ಲಿ ಮಕ್ಕಳು ಒಬ್ಬಂಟಿಯಾಗಿ ಓಡಾಡಲು ಬಿಡಬಾರದು. ಯಾವೂದೇ ಕಾರಣಕ್ಕೂ ಬಯಲು ಬಹಿರ್ದೆಸೆಗೆ ಹೋಗಬಾರದು ಅಕಸ್ಮಿಕವಾಗಿ ಆನೆ ಹಾಗೂ ಇತರೆ ವನ್ಯಜೀವಿಗಳು ಕಂಡುಬಂದ ಸಂದರ್ಭದಲ್ಲಿ ವಿನಾಕಾರಣ ಮೊಬೈಲ್‌ನಲ್ಲಿ ವಿಡಿಯೋ ಮಾಡುವುದು, ಫೋಟೋ ಕ್ಲಿಕ್ಕಿಸುವುದು, ಸೆಲ್ಫಿ ತೆಗೆದುಕೊಳ್ಳುವುದು ಹಾಗೂ ಗಲಾಟೆ ಮಾಡುವುದನ್ನು ಮಾಡಬಾರದು ಎಂದು ಎಚ್ಚರಿಸಿದೆ.
ರೈತರು ಹೊಲಕ್ಕೆ ಅಥವಾ ದನ ಕರು/ಚಾನುವಾರುಗಳನ್ನು ಮೇಯಿಸಲು ಹೋದಾಗ ಬಯಲು ಪ್ರದೇಶಗಳಲ್ಲಿ ನಿಲ್ಲುವುದು, ಪೊದೆಗಳ ಬಳಿ ಒಂಟಿಯಾಗಿ ಕೂರಬಾರದು. ಜಾನುವಾರುಗಳನ್ನು ಮೇಯಿಸುವಾಗ ಹಠಾತ್ತಾಗಿ ಅಹಾರಕ್ಕಾಗಿ ದಾಳಿ ಮಾಡಿದರೆ ದೂರ ಸರಿಯಬೇಕು. ಪ್ರತಿರೋಧ ಮಾಡಬಾರದು. ಜಾನುವಾರವನ್ನು ವನ್ಯಜೀವಿಗಳು ಹತ್ಯೆ ಮಾಡಿದಲ್ಲಿ ಅದನ್ನು ಮುಟ್ಟಬಾರದು. ವಾಸದ ಮನೆಗಳು ಮತ್ತು ಜನನಿಬಿಡ ಪ್ರದೇಶಗಳ ಸುತ್ತಮುತ್ತ ಕುರಿ, ಕೋಳಿ ಇನ್ನಿತರೆ ಮಾಂಸದ ತ್ಯಾಜ್ಯ ವಸ್ತುಗಳನ್ನು ಬಿಸಾಡಬಾರದು. ಆನೆ ಹಾಗೂ ಇತರೆ ವನ್ಯಜೀವಿಗಳು ಹಾವಳಿ ಕುರಿತಂತೆ ಯಾವುದೇ ಸುಳ್ಳು ಸುದ್ದಿ, ವದಂತಿ ಹಬ್ಬಿಸಬಾರದು ಅನಾವಶ್ಯಕವಾಗಿ ಸ್ಫೋಟಕ ವಸ್ತುಗಳನ್ನು ಸಿಡಿಸಬಾರದು ಎಂದು ಲೋಂಡಾ ಪ್ರಾದೇಶಿಕ ವಲಯ ಕಚೇರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.















