ಬೆಂಗಳೂರು: ದುಡಿಯುವ ವರ್ಗದ ಹಿತ ಕಾಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಾರ್ಮಿಕ ಸಂಹಿತೆಗಳಲ್ಲಿ ಕೆಲವು ನ್ಯೂನ್ಯತೆಗಳಿದ್ದು, ಅವುಗಳನ್ನು ಪರಾಮರ್ಶೆ ನಡೆಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಭಾರತೀಯ ಮಜ್ದೂರ್ ಸಂಘ ಆಗ್ರಹಿಸಿದೆ.
ಈ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಉಪಾಧ್ಯಕ್ಷ ಪವನ್ಕುಮಾರ್ ಸುದ್ದಿಗಾರರೊಂದಿಗೆ ಸಂವಾದ ನಡೆಸಿದರು. ದಶಕಗಳ ಬಳಿಕ ಕೇಂದ್ರ ಸರ್ಕಾರವು ವಿವಿಧ 29 ಕಾರ್ಮಿಕ ಸಂಹಿತೆಗಳನ್ನು ಒಟ್ಟುಗೂಡಿಸಿ ಪರಿಷ್ಕರಣೆ ಮೂಲಕ ಪ್ರತ್ಯೇಕವಾದ ನಾಲ್ಕು ಸಂಹಿತೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಇವುಗಳಲ್ಲಿ ವೇತನ ಸಂಹಿತೆ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸುವ ಕಾಯ್ದೆಗಳು ಸ್ವಾಗತಾರ್ಹ ಆದರೆ ಉಳಿದಂತೆ ಕೈಗಾರಿಕೆ ಸಂಪರ್ಕ ಸಂಹಿತೆ ಹಾಗೂ ವೃತ್ತಿ ಸುರಕ್ಷಣೆ, ಆರೋಗ್ಯ ಮತ್ತು ಉದ್ಯೋಗ ಕುರಿತು ನಿಬಂಧನೆಗಳು ಸಂಹಿತೆಗಳಲ್ಲಿ ಕೆಲವು ಅಸ್ಪಷ್ಟತೆ ಹಾಗೂ ಲೋಪಗಳಿದ್ದು, ತ್ರಿಪಕ್ಷೀಯ ಪಾಲುದಾರ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಚರ್ಚಿಸಿ ಬಗೆಹರಿಸಬೇಕಿದೆ ಎಂದರು.
ಮಹಿಳಾ ಕಾರ್ಮಿಕರು ಸೇರಿದಂತೆ ಅಸಂಘಟಿತ ಹಾಗೂ ಗಿಗ್ ಕಾರ್ಮಿಕರ ಹಿತರಕ್ಷಣೆಯ ನಿಟ್ಟಿನಲ್ಲಿ ರೂಪಿಸಿರುವ ಕಾಯ್ದೆಗಳು ಶ್ಲಾಘನೀಯ. ಇದರಲ್ಲಿ ಸಾಮಾಜಿಕ ಭದ್ರತೆ ಬಗ್ಗೆ ಪ್ರಸ್ತಾಪವಿದ್ದರೂ ಅನುಷ್ಠಾನದ ಕಾರ್ಯವಿಧಾನಗಳು, ನಿಧಿ ಸಂಗ್ರಹಣೆ ಕುರಿತು ಸ್ಪಷ್ಟನೆ ಇಲ್ಲ. ಕೈಗಾರಿಕಾ ಸಂಬಂಧ ಸಂಹಿತೆಯು ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಇದರಲ್ಲಿ ಮುಷ್ಕರವನ್ನು ನಿರ್ಬಂಧಿಸುವ ಹಾಗೂ ಯಾವುದೇ ಪೂರ್ವಸೂಚನೆ ಇಲ್ಲದೇ ಕಾರ್ಮಿಕರನ್ನು ವಜಾಗೊಳಿಸುವಂತಹ ವಿರೋಧಿ ನೀತಿಗಳಿವೆ. ಅಲ್ಲದೇ ಕೆಲವು ಆಯ್ದ ಅಸಂಘಟಿತ ವಲಯದ ಕಾರ್ಮಿಕರನ್ನು ಕನಿಷ್ಠ ವೇತನದಂತಹ ಕಾಯ್ದೆಯಿಂದ ಹೊರಗಿಟ್ಟಿರುವುದು ಸಮಂಜಸವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕವು ಪ್ರಥಮವಾಗಿ ಕನಿಷ್ಠ ವೇತನ ಕಾಯ್ದೆ ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲು ಮುಂದಾಗಿರುವ ಕ್ರಮ ಶ್ಲಾಘನೀಯ. ಅದರಂತೆ, ಕೇಂದ್ರ ಸರ್ಕಾರವು ಕೂಡ ಅಸಂಘಟಿತ ವಲಯದ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಬೇಕು. ಕಾರ್ಮಿಕ ಸಚಿವಾಲಯವು ಶೀಘ್ರವಾಗಿ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್ಸಿ) ಆಯೋಜಿಸಿ ಕಾರ್ಮಿಕರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಬೇಕು. ಕಾಯ್ದೆಗಳಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವ ತನಕ ಆತುರದಲ್ಲಿ ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಕ್ಕೆ ತರಬಾರದು ಎಂದು ಒತ್ತಾಯಿಸಿದರು.
ಭಾರತೀಯ ಮಜ್ದೂರ್ ಸಂಘವು ಕಳೆದ 70 ವರ್ಷದಿಂದ ದೇಶದ ಅತಿದೊಡ್ಡ ಕಾರ್ಮಿಕರ ಪ್ರತಿನಿಧಿ ಸಂಘಟನೆಯಾಗಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಹೋರಾಟ ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಾರ್ಮಿಕರ ಹಿತರಕ್ಷಣೆಗೆ ಬದ್ಧವಾಗಿ ಬಜೆಟ್ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟು ಸಮರ್ಪಕವಾಗಿ ಬಳಕೆ ಮಾಡಬೇಕು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕಾರ್ಮಿಕ ವಿರೋಧಿ ನೀತಿಗಳು ಹಾಗೂ ಧೋರಣೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಭಾರತೀಯ ಮಜ್ದೂರ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್, ಎಚ್.ಎಂ. ವೆಂಕಟೇಶ್ ಹಾಗೂ ಗಂಗಾಧರ್ ಇದ್ದರು.














