ಸಾಗರ ಕೃಷ್ಣ ಕೊಳೇಕರ, ಸಂಪಾದಕರು
ನಮ್ಮ ರಾಜ್ಯದ ಪೊಲೀಸರು ಸಣ್ಣ ಸಣ್ಣ ಪ್ರಕರಣಗಳಾದ ಪಿಕ್ ಪಾಕೆಟ್, ಕಳ್ಳತನಗಳಿಗೆ ಎಫ್. ಐ.ಆರ್ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದನ್ನು ಸರ್ವೆ ಸಾಮಾನ್ಯವಾಗಿ ಗಮನಿಸಿದ್ದೇವೆ ಆದರೆ ಬೆಂಗಳೂರು ಹೃದಯಭಾಗದಲ್ಲಿ ಕಾಮಗಾರಿಯ ವೇಳೆ ವ್ಯಕ್ತಿಯೊಬ್ಬರು ತೆರೆದಿದ್ದ ಗುಂಡಿಗೆ ಬಿದ್ದು ಸಾವನೊಪ್ಪಿದ್ದರೂ ಮ್ಯಾಜಿಕ್ ಮಾದರಿಯಲ್ಲಿ 6 ತಿಂಗಳಾದರೂ ಪ್ರಕರಣ ದಾಖಲಾಗದಿರುವುದು ಸೋಜಿಗವೆಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.
ಜನರಲ್ಲಿ ವ್ಯವಸ್ಥೆಯ ಬಗ್ಗೆ ಕಳೆದು ಹೋಗಿರುವ ನಂಬಿಕೆಯನ್ನು ಮರುಸ್ಥಾಪಿಸಲು ಹಾಗೂ ಅವರಿಗೆ ಆಲದ ಮರದ ಮಾದರಿಯಲ್ಲಿ ಪ್ರಜಾನೆರಳು ಸದಾ ಸನ್ನದ್ಧವಾಗಿದ್ದು, ಈ ಪ್ರಕರಣದಲ್ಲೂ ರಸ್ತೆ ಗುತ್ತಿಗೆದಾರರು, ಪಾಲಿಕೆಯ ಅಧಿಕಾರಿಗಳು, ಪೊಲೀಸರ ದಿವ್ಯ ನಿರ್ಲಕ್ಷ್ಯದ ಕುರಿತು ಜನವರಿ ತಿಂಗಳಲ್ಲಿಯೇ ನಮ್ಮ ಪತ್ರಿಕೆ ಪ್ರಕರಣದ ಕುರಿತು ವಿಶೇಷ ವರದಿಯನ್ನು ಪ್ರಕಟಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದೆ. ಆದರೆ ಠಾಣೆಯ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ ದಿಂದ ಎರಡು ತಿಂಗಳ ನಂತರವೂ ಯಾವುದೇ ಪ್ರಕರಣ ದಾಖಲಾಗಿಲ್ಲದಿರುವುದು ಅವ್ಯವಸ್ಥೆಯ ಕೈಗನ್ನಡಿಯಾಗಿದೆ.
ಪ್ರಜಾನೆರಳು ಪತ್ರಿಕೆಯ ವರದಿಗಾರರು ಸಹ ಉತ್ತರ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಮಲ್ಲೇಶ್ವರದ ಠಾಣೆಯ ಸಿಬ್ಬಂದಿಗಳ, ಎಸ್ಐ, ಪೊಲೀಸ್ ಇನ್ಸ್ಪೆಕ್ಟರ್ ಗಮನಕ್ಕೆ ವರದಿಯನ್ನು ಖುದ್ದಾಗಿ ಗಮನಕ್ಕೆ ತಂದರೂ ತಾವೇ ದೂರನ್ನು ನೀಡಿ ಎನ್ನುವ ಬೇಜವಾಬ್ದಾರಿತನವನ್ನು ಪ್ರದರ್ಶಿಸುವ ಮಾತುಗಳು ಕೇಳಿ ಬಂದಿವೆ. ಒಟ್ಟಿನಲ್ಲಿ ವರದಿ ಮಾಡಿ 2 ತಿಂಗಳು ಹಾಗೂ ಪ್ರಕರಣ ಅದಕ್ಕಿಂತ ಮೂರ್ನಾಲ್ಕು ತಿಂಗಳ ಹಿಂದೆ ಜರುಗಿದ್ದರೂ ಅಷ್ಟೇನು ಕೆಲಸದ ಒತ್ತಡವಿಲ್ಲದ ಈ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಪ್ರತಿಷ್ಠಿತ ಬಡಾವಣೆಯ ಜನಸಾಮಾನ್ಯರೂ ಸೇರಿದಂತೆ ಪ್ರಕರಣದ ನಮ್ಮಲ್ಲಿ ಮೂಡುತ್ತಿರುವ ಹಲವು ಪ್ರಶ್ನೆಗಳಿಗೆ ಈಗಲಾದರೂ ಠಾಣೆಯ ಮುಖ್ಯಸ್ಥರು ಉತ್ತರಿಸುತ್ತಾರಾ? ಪ್ರಕರಣ ದಾಖಲಾಗುತ್ತದಾ? ಸತ್ತಿರುವ ಅಮಾಯಕ ವ್ಯಕ್ತಿಗೆ ನ್ಯಾಯ ಸಿಗುತ್ತದಾ? ಗುತ್ತಿಗೆದಾದರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಘಟನೆಯ ಹೊಣೆ ಹೊರಲಿದ್ದಾರ? ಎನ್ನುವುದನ್ನು ಕಾದು ನೋಡಬೇಕಿದೆ.















