ಸಾಗರ ಕೃಷ್ಣ ಕೊಳೇಕರ, ಸಂಪಾದಕರು
ಬೆಳಗಾವಿ ತಾಲೂಕಿನ ಭೂ ದಾಖಲೆಗಳ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ಸ್ ಅಜಯ್ ಹಾದಿಮನಿ ಸಾಹೇಬರ ಲಂಚದ ಹಾವಳಿ ಯಾವುದೇ ಕಾರಣಕ್ಕೂ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಈ ಕುರಿತು ಪ್ರಜಾನೆರಳು ಪತ್ರಿಕೆಯಲ್ಲಿ ಎರಡೆರಡು ಬಾರಿ ವರದಿಯಾಗಿದ್ದರೂ ಸಹ ಬದಲಾವಣೆಯ ಲಕ್ಷಣಗಳು ತೋರದಿರುವುದು ಈ ಅಧಿಕಾರಿಯ ಲಜ್ಜೆಗೆಡತನಕ್ಕೆ ಸಾಕ್ಷಿಯಾಗಿದೆ.
ನಮ್ಮ ಪತ್ರಿಕೆಯ ವರದಿಗೆ ಎಚ್ಚೆತ್ತ ಮೇಲಾಧಿಕಾರಿ, ನಾಮಕಾವಸ್ತೆ ಶೋಕಾಸ್ ನೋಟಿಸ್ ಹಾದಿಮನಿ ಅವರಿಗೆ ನೀಡಿದ್ದಾರೆ. ಅದಕ್ಕೆ ಡೋಂಟ್ ಕೇರ್ ಎನ್ನುವಂತೆ ನೆಡೆದುಕೊಳ್ಳಲಾಗುತ್ತಿದೆ. ಈ ತಾಲೂಕು ಕಚೇರಿಯಲ್ಲಿ ಲಂಚವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎನ್ನುವ ಮಾತು ಹಾಗೆಯೇ ಮುಂದುವರೆದಿದೆ. ಇವೆಲ್ಲವನ್ನೂ ನೋಡಿದರೆ ಕಾಯ್ದೆಯ ರೂಪದಲ್ಲಿ ಲಂಚಾವತಾರ ಜಾರಿಯಾಗಿದೆಯೇ ಎನ್ನುವ ಪ್ರಶ್ನೆಗಳು ಮೂಡುತ್ತಿದೆ.
ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಠಾರಿಯ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಅಥವಾ ಲೋಕಾಯುಕ್ತ ಪೊಲೀಸರಿಂದ ತನಿಖೆಯಾಗುವುದೊಂದೇ ದಾರಿಯಾಗಿದೆ. ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಲಂಚಗೇಡಿತನಕ್ಕೆ ಕಡಿವಾಣ ಬೀಳಲಿದೆ. ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸಹ ರಾಜ್ಯ ಸರ್ಕಾರ ಲಂಚಕ್ಕೆ ಝೀರೋ ಟಾಲರನ್ಸ್ ಎನ್ನುವುದನ್ನು ಘೋಷಿಸಿದ್ದು, ಇದು ಘೋಷಣೆಗಷ್ಟೇ ಸೀಮಿತವೇ ಎನ್ನುವ ಅನುಮಾನ ಕೂಡ ಕಾಡುತ್ತಿರುವುದು ಸುಳ್ಳಲ್ಲ.
ಭೂ ದಾಖಲೆಗಳ ಇಲಾಖೆ ಮಾತ್ರವಲ್ಲದೆ ಪ್ರತಿಯೊಂದು ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಎನ್ನುವುದು ತಾಂಡವವಾಡುತ್ತಿದ್ದರೂ ಸಹ ಸರ್ಕಾರ ಕಣ್ಮುಚ್ಚಿ ಕುಳಿತಂತೆ ಭಾಸವಾಗುತ್ತಿದೆ. ಅಜಯ್ ಹಾದಿಮನಿ ಅಂತಹ ಅಧಿಕಾರಿಗಳು ರೇಟ್ ಕಾರ್ಡ್ ಅನ್ನೇ ಸೃಷ್ಟಿಸಿದ್ದು, ಈ ಕುರಿತ ದೂರುಗಳು ಕಸದ ಬುಟ್ಟಿಗೆ ಸೇರಿವೆ. ಪ್ರಜಾ ನೆರಳು ಪತ್ರಿಕೆ ಈ ನಿಟ್ಟಿನಲ್ಲಿ ಸಮರವನ್ನು ಮುಂದುವರಿಸಲು ಪಣ ತೊಟ್ಟಿದ್ದು, ಪರಿಹಾರ ಅತಿ ಶೀಘ್ರದಲ್ಲೇ ದೊರೆಯಲಿದೆ ಎನ್ನುವ ಆಶಾಭಾವನೆಯಿದೆ.















