ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

WhatsApp
Telegram
Facebook
Twitter
LinkedIn

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಇತಿಹಾಸದಲ್ಲಿ ಈವರೆಗೆ ಒಬ್ಬ ಮಹಿಳೆಯೂ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿಲ್ಲ ಎಂಬ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕು ಎಂದು ಹಿತೈಶಿಗಳು, ಗುರುಹಿರಿಯರು ಬಯಸಿದ ಕಾರಣ ಸ್ಪರ್ಧಿಸುತ್ತಿದ್ದೇನೆ. ಗೆದ್ದರೆ ಹಿರಿಯ, ಕಿರಿಯ ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡಲಿದ್ದೇನೆ. ಕನ್ನಡ ಪುಸ್ತಕಗಳ ಮುದ್ರಣಕ್ಕೆ ಹೆಚ್ಚು ಅವಕಾಶ ದೊರಕಿಸಿಕೊಡುತ್ತೇನೆ. ಮಹಿಳೆಯರಿಗೆ ಆದ್ಯತೆಯನ್ನು ನೀಡಲಿದ್ದೇನೆ ಎಂದು ಹೇಳಿದರು.

ಕನ್ನಡವನ್ನು ಉಳಿಸಬೇಕಾದರೆ ಕೇವಲ ಕನ್ನಡದ ಬಗ್ಗೆ ಮಾತನಾಡಿದರೆ ಸಾಲದು. ಕನ್ನಡ ಮಾತನಾಡುವ ಮಕ್ಕಳನ್ನು ಬೆಳೆಸಬೇಕು. ಅದಕ್ಕಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ, ಬಲಪಡಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಆದರೆ ಕರ್ನಾಟಕದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿದ್ದು, ಕಳೆದ ಕೆಲವು ವರ್ಷಗಳಲ್ಲಿ ಸುಮಾರು 6 ಸಾವಿರ ಶಾಲೆಗಳು ಮುಚ್ಚಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಸುಮಾರು 38 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ದಾಖಲಾತಿ ಪ್ರಮಾಣವೂ ಕುಸಿಯುತ್ತಿದೆ. ಹೀಗಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಸರ್ಕಾರದ ಜತೆಗೆ ಸಮಾಜವೂ ಕೈಜೋಡಿಸಬೇಕಾದ ಅಗತ್ಯವಿದೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರೆ ಆರು ಕೋಟಿ ಕನ್ನಡಿಗರ ಚಳವಳಿ ರೂಪಿಸಿ ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಯೋಜನೆ ಜಾರಿಗೆ ತರಲಾಗುವುದು ಎಂದರು.

ಶಾಲೆಗಳ ಮೂಲಸೌಕರ್ಯ, ಗ್ರಂಥಾಲಯ, ಕಲಿಕಾ ವಾತಾವರಣ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಾರ್ವಜನಿಕರ ಸಹಭಾಗಿತ್ವ ಪಡೆಯಲಾಗುವುದು. ಇದಕ್ಕಾಗಿ ಈಗಾಗಲೇ ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ. ಶಾಲಾ ಕಟ್ಟಡಗಳ ಸುರಕ್ಷತೆಯೂ ಪ್ರಮುಖ ಆದ್ಯತೆಯಾಗಿದ್ದು, ಗೋಡೆ ಕುಸಿದು ಮಕ್ಕಳು ಮೃತಪಟ್ಟಂತಹ ಘಟನೆಗಳು ಮರುಕಳಿಸದಂತೆ ಶಾಲಾ ಕಟ್ಟಡಗಳ ಸಮಗ್ರ ಪರಿಶೀಲನೆ ಹಾಗೂ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗುವುದು ಎಂದು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ತಿಳಿಸಿದರು.

ಈ ವೇಳೆ ಮಾಜಿ ಶಾಸಕಿ ಪ್ರಮೀಳ ನೇಸರ್ಗಿ, ಸಮಾಜ ಸೇವಕಿ ರೇವತಿ ಕಾಮತ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳ ನಾಯ್ಡು, ವರ್ಷಾ, ಗ್ರೇಸಿ ಲೋಬೋ, ಜಯಶ್ರೀ ಇದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon