ಬೆಂಗಳೂರು: ಪಶುವೈದ್ಯಾಧಿಕಾರಿ ಹುದ್ದೆಗೆ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ನೀಡಬೇಕು ಹಾಗೂ ಪರೀಕ್ಷಾ ಅಕ್ರಮದ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಕಾನೂನುಬದ್ಧಿ ಕ್ರಮ ಕೈಗೊಳ್ಳಬೇಕು ಎಂದು ಅಭ್ಯರ್ಥಿಗಳ ಸಮಿತಿಯ ಸಂಚಾಲಕ ಡಾ. ಹನುಮಂತಪ್ಪ ಕಳಾಸಪುರ ಆಗ್ರಹಿಸಿದರು.
ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಸಮಿತಿಯ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸೇವೆಗಳು ಅತ್ಯಂತ ಅಗತ್ಯ ಸೇವೆಗಳಾಗಿವೆ. ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ರೈತರ ಹಿತದೃಷ್ಟಿಯಿಂದ ಪಶುವೈದ್ಯಾಧಿಕಾರಿಗಳ ಸೇವೆ ಮಹತ್ವದ್ದಾಗಿದೆ. ಇತ್ತೀಚೆಗೆ ನಡೆದ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 329 ಅಭ್ಯರ್ಥಿಗಳ ಪೈಕಿ 29 ಅಭ್ಯರ್ಥಿಗಳ ವಿರುದ್ಧ ಪರೀಕ್ಷಾ ಅಕ್ರಮ ಹಾಗೂ ನಕಲು ಮಾಡಿ ಆಯ್ಕೆಯಾದ ಆರೋಪವಿದೆ. ಈ ಕುರಿತು ಸಿಐಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
ನಾವು ಸಿಐಡಿ ತನಿಖೆಯನ್ನು ವಿರೋಧಿಸುತ್ತಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಸಿಐಡಿ ಕಚೇರಿಗೆ ನಮ್ಮನ್ನು ಕರೆದರೂ ಯಾವುದೇ ಭಯ ಅಥವಾ ಹಿಂಜರಿಕೆ ಇಲ್ಲದೆ ಹಾಜರಾಗುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಅನಗತ್ಯ ಕಿರುಕುಳ ನೀಡಬಾರದು. ಸುಪ್ರೀಂ ಕೋರ್ಟ್‌ನ ವಿವಿಧ ಪ್ರಕರಣಗಳ ತೀರ್ಪುಗಳ ಅನ್ವಯ ಕಳಂಕಿತರ ವಿರುದ್ಧ ಕ್ರಮ ಕೈಗೊಂಡು, ಅರ್ಹ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ತಿಂಗಳೊಳಗೆ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಯಾವುದೇ ಅಕ್ರಮದಲ್ಲಿ ಭಾಗಿಯಾಗದ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ನೀಡಬೇಕು ಎಂದು ಡಾ. ಹನುಮಂತಪ್ಪ ಕಳಾಸಪುರ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಗುರುಬಸವರಾಜ್, ಡಾ. ಪೂಜಾ. ಹೆಚ್, ಡಾ. ಅವಿನಾಶ್ ಬಿರಡಿ, ಡಾ. ಸುನೀಲ್, ಡಾ. ಚಾಂದಿನಿ ಎನ್, ಡಾ. ಶ್ರೀಶೈಲಾ, ಡಾ. ತನ್ವಿತ್, ಡಾ. ಪ್ರಿಯಾಂಕ ಹಾಗೂ ಡಾ. ವಿಕಾಸ್ ಸೇರಿದಂತೆ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಹಲವು ಅಭ್ಯರ್ಥಿಗಳು ಭಾಗವಹಿಸಿದ್ದರು.















