ಬೆಂಗಳೂರು: ನೂತನವಾಗಿ ನಿರ್ಮಾಣಗೊಂಡಿರುವ ಸುಪ್ರಸಿದ್ಧ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಪೊಟೆನ್ಶಿಯಲ್ ಮೊಬಿಲಿಟೀಸ್ ಎನ್ನುವ ಶೀರ್ಷಿಕೆಯಡಿಯ ಭಾರತ ಮತ್ತು ಶ್ರೀಲಂಕಾದ ಕಲಾ ಪ್ರತಿಭೆಗಳ ವಿಶಿಷ್ಟ ಕಲಾ ಪ್ರದರ್ಶನ ಜನರನ್ನು ಅಪಾರವಾಗಿ ಆಕರ್ಷಿಸುತ್ತಿದೆ.
ಆಗಸ್ಟ್ 28 ರಿಂದ ನಡೆಯುತ್ತಿರುವ ಪೊಟೆನ್ಶಿಯಲ್ ಮೊಬಿಲಿಟೀಸ್ ಪ್ರದರ್ಶನವು ಬಾಡೀಸ್, ಬಾರ್ಡರ್ಸ್, ಮೆಮೊರಿಸ್ ಅಂಡ್ ಬಿಕಮಿಂಗ್ ಟ್ಯಾಗ್ ಲೈನ್ ಅನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ವಸ್ತುನಿಷ್ಠ ವಿಷಯದಡಿ ಮೂಡಿಬಂದಿದೆ. ಇಡೀ ಪ್ರದರ್ಶನದ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ವತಃ ಕಲಾವಿದರಾದರ ಯಲಹಂಕ ನಿವಾಸಿ ಜೀತಿನ್ ರಂಗೇರ್ ಅವರು ತುಂಬಾ ಅಚ್ಚುಕಟ್ಟಾಗಿ ಚಿತ್ರಕಲೆಗಳು ಮತ್ತು ವಾಸ್ತುಶಿಲ್ಪಗಳನ್ನು ಜೋಡಿಸಿರುವುದು ಎಂಥವರನ್ನು ಮಂತ್ರಮುಗ್ದರನ್ನಾಗಿಸುತ್ತಿದೆ.
ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಶಿಕ್ಷಣ ಪೂರೈಸಿ ಕಲಾಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜೀತಿನ್ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಕಲಾ ಪ್ರದರ್ಶನವನ್ನು ಕ್ಯುರೇಟ್ ಮಾಡುತ್ತಿದ್ದು, ಬೆಂಗಳೂರು ಮೂಲದ ಅಪಾರ್ (ಏಷ್ಯನ್ ಪರ್ಫಾರ್ಮೆನ್ಸ್ ಆರ್ಟ್ ಅಂಡ್ ರಿಸರ್ಚ್) ಸಂಸ್ಥೆ ಮತ್ತು ಶ್ರೀಲಂಕಾ ದೇಶದ ಪ್ರೆಸೆಂಟ್ ಟೆನ್ಸ್ ಸಂಸ್ಥೆ ಗಳ ಸಹಯೋಗ ಅವರಿಗೆ ದೊರೆತಿದೆ.
ಈ ಪ್ರದರ್ಶನದಲ್ಲಿ ಗಡಿಗಳು, ದೇಹ, ಸಂಸ್ಕೃತಿ ಮತ್ತು ಚಲನಶೀಲತೆಯ ಸಂಕೀರ್ಣತೆಯನ್ನು ಕಲೆಯ ಮೂಲಕ ಬಿಂಬಿಸಲಾಗಿದೆ. ಪ್ರದರ್ಶನದಲ್ಲಿ ಒಟ್ಟು 14 ದೃಶ್ಯ ಕಲಾವಿದರು ಹಾಗೂ 30ಕ್ಕೂ ಹೆಚ್ಚು ಪರ್ಫಾರ್ಮೆನ್ಸ್ ಆರ್ಟಿಸ್ಟ್ಸ್ ಭಾಗವಹಿಸಿದ್ದಾರೆ. ಇಲ್ಲಿ ಚಿತ್ರಕಲೆ, ಶಿಲ್ಪಕಲೆ, ವೀಡಿಯೊ ಆರ್ಟ್ ಮತ್ತು ಲೈವ್ ಪರ್ಫಾರ್ಮೆನ್ಸ್ ಕಲೆಗಳನ್ನು ಒಟ್ಟಿಗೆ ಒಂದೆಡೆ ತರಲಾಗಿದ್ದು, ಈ ಹಿನ್ನಲೆಯಲ್ಲಿ ಗ್ಯಾಲರಿಯೊಳಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮುಖ್ಯವಾಗಿ ಶ್ರೀಲಂಕಾದ ಜಗತ್ ವೀರಸಿಂಘೆ, ಅನೋಲಿ, ಬಂಧು ಮನಂಪೆರಿ, ಗಾಡ್ವಿನ್ ಕಾನ್ಸ್ಟಂಟೈನ್ ಹಾಗೂ ಪ್ರಿಯಂತಿ ಮುಂತಾದ ಪ್ರಸಿದ್ಧ ಕಲಾವಿದರು ಪ್ರದರ್ಶನದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದು, ಭಾರತದ ಸ್ಮಿತಾ ಕರಿಯಪ್ಪ, ಸಲೋನಿ, ಡಿಂಪಲ್, ಪರಮೇಶ್ ಜೋಳದ್ ಹಾಗೂ ಸುರೇಖಾ ಅವರುಗಳು ನಮ್ಮ ಮಣ್ಣಿನ ಸಾಂಸ್ಕೃತಿಕ ಹಾಗೂ ಸುರೇಖಾ ಕಲಾತ್ಮಕ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇವರಲ್ಲಿ ಸ್ಮಿತಾ ಕರಿಯಪ್ಪ, ಸಲೋನಿ, ಡಿಂಪಲ್ ಪರ್ಫಾರ್ಮೆನ್ಸ್ ಆರ್ಟಿಸ್ಟ್ಸ್ ಗಳಾಗಿದ್ದರೆ, ಸುರೇಖಾ ವಿಡಿಯೋ ಮತ್ತು ವಿಶುವಲ್ ಕಲಾವಿದೆಯಾಗಿದ್ದಾರೆ. ಮುರಳಿ ಚಿರೋತ್ ಅವರ ವುಡ್ ಅಂಡ್ ಆಟೋಮೇಟಿವ್ ಪೇಂಟ್ ಕಲಾಕೃತಿಯಂತೂ ಪ್ರದರ್ಶನದ ಕೇಂದ್ರ ಬಿಂದುವಾಗಿ ಹೊರಹೊಮ್ಮಿದೆ.
ಪ್ರದರ್ಶನದ ಕುರಿತು ಮಾದ್ಯಮಗಳ ಜೊತೆ ಮಾತನಾಡಿರುವ ಜೀತಿನ್ ರಂಗೇರ್ ಅವರು, ಆರಂಭಿಕ ದಿನದಿಂದ ಸಾರ್ವಜನಿಕರು ಹಾಗೂ ಕಲಾ ಸಮುದಾಯದಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರದರ್ಶನದ ಭಾಗವಾಗಿ ಆಯೋಜಿಸಲಾಗಿದ್ದ ಸಂವಾದಗಳಲ್ಲಿ ಖ್ಯಾತ ಕಲಾವಿದರಾದ ಜಗತ್ ವೀರಸಿಂಘೆ, ಪುಷ್ಪಮಾಲ, ಸುರೇಖಾ ಹಾಗೂ ಕವಯಿತ್ರಿ ಮಮತಾ ಸಾಗರ್ ಭಾಗವಹಿಸಿ ಕಲೆಯ ವಿವಿಧ ಆಯಾಮಗಳ ಕುರಿತು ಸಂವಾದ ನಡೆಸಿದರು ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಈ ಕಲಾ ಆಂದೋಲನವನ್ನು ಭಾರತದ ವಿವಿಧ ನಗರಗಳಿಗೆ ಕೊಂಡೊಯ್ದು ದಕ್ಷಿಣ ಏಷ್ಯಾದ ಯುವ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಮತ್ತು ಬೆಂಬಲ ನೀಡುವ ಉನ್ನತ ಆಶಯವನ್ನು ನಮ್ಮ ಸಂಸ್ಥೆ ಹೊಂದಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಕೂಡ ಗ್ಯಾಲರಿಗಳಿಗೆ ಹೆಚ್ಚು ಭೇಟಿ ನೀಡಿ ಕಲೆಯನ್ನು ನೇರವಾಗಿ ಆಸ್ವಾದಿಸಿ ಕಲಾವಿದರೊಂದಿಗೆ ನೇರ ಸಂವಹನವನ್ನು ನಡೆಸಿದರೆ ನಮ್ಮ ಪ್ರಯತ್ನಗಳಿಗೆ ಸಾರ್ಥಕತೆ ದೊರೆಯಲಿದೆ ಎಂದು ಹೇಳಿದರು.















