ಬೆಂಗಳೂರು: ಪಶು ವೈದ್ಯರು ಕಾಯಿಲೆ ಪತ್ತೆದಾರರೂ ಆಗಬೇಕು. ಪಶುಗಳಿಗೆ ಬರುವ ಕಾಯಿಲೆಗಳನ್ನು ಶೀಘ್ರವಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅಭಿಪ್ರಾಯಪಟ್ಟರು.
ಹೆಬ್ಬಾಳದಲ್ಲಿ ಶನಿವಾರ ಆಯೋಜಿಸಿದ್ದ ಪಶು ವೈದ್ಯಕೀಯ ಕಾಲೇಜಿನ 69 ನೇ ಸಂಸ್ಥಾಪನಾ ದಿನಾಚರಣೆ ಮತ್ತು ತಾಂತ್ರಿಕ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ. ಪಶು ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಸವಾಲುಗಳಿವೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರಾಣಿಗಳ ಆರೋಗ್ಯ ಸಂರಕ್ಷಣೆ ಮಾಡುವ ಮೂಲಕ ರೈತರ ಆರ್ಥಿಕತೆಯನ್ನು ಸದೃಢಗೊಳಿಸಬೇಕು ಎಂದರು.
ಪಶುಗಳಿಗೆ ಕಾಯಿಲೆಗಳನ್ನು ಪತ್ತೆಹಚ್ಚಿ ಅವುಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಶೀಘ್ರವೇ ಗುಣಪಡಿಸಬೇಕು. ಪಶುಗಳಿಗೆ ಚಿಕಿತ್ಸೆ ನೀಡುವ ಮೂಲಕ ಆಹಾರ ಭದ್ರತೆಯೂ ಸಾಧ್ಯವಾಗುತ್ತದೆ. ವಿವಿಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗುತ್ತಿವೆ ಎಂದರು.
ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿ, ಪಶು ವೈದ್ಯರು ಜೀವವೈವಿಧ್ಯದ ಸಂರಕ್ಷಕರಾಗಿಯೂ ಕಾರ್ಯನಿರ್ವಹಿಸಬೇಕು. ಹಳ್ಳಿಕಾರ್, ಅಮೃತ್ ಮಹಲ್ ಸೇರಿದಂತೆ ಮತ್ತಿತರ ತಳಿಗಳನ್ನು ಎಷ್ಟರಮಟ್ಟಿಗೆ ಸಂರಕ್ಷಣೆ ಮಾಡಿದ್ದೇವೆ ಎಂಬುದು ಮುಖ್ಯವಾಗಿದೆ. ಪಶು ವೈದ್ಯಕೀಯ ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ ಕಾಲಿಟ್ಟಿದ್ದು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ವಿವಿ ಕುಲಸಚಿವ ಪ್ರೊ.ಪಿ.ಟಿ.ರಮೇಶ್, ಹೆಬ್ಬಾಳದ ಪಶುವೈದ್ಯಕೀಯ ಮಹಾ ವಿದ್ಯಾಲಯದ ಡಿ.ಎಚ್.ಲತಾ, ಡಾ.ವೆಂಕಟಾಚಲ, ಡಾ. ಶ್ರೀಕೃಷ್ಣ ಇಸ್ಲೂರ್, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.














